ಗಣಪತಿ ಬಪ್ಫ ಮೊರೆಯಾ
ಗಣಪತಿ ಬಪ್ಫ ಮೊರೆಯಾ
ಋಷಿ ಪಂಚಮಿ ದಿನ ಬೆಳಗಾಗುವುದೇ ತಡ. ಮಧ್ಯಾಹ್ನ ಮಾಮೂಲು ಪೂಜೆ. ಊಟವಾದ ನಂತರ ಹೆಣ್ಣು, ಗಂಡು ಭೇದವಿಲ್ಲದೆ ಹೊಸಬಟ್ಟೆ ಹಾಕಿಕೊಂಡು ತಯಾರಾಗಿದ್ದೇ ಆಗಿದ್ದು. ನನಗಂತೂ ಈಗ ಬಾಬ್ ಹೋಗಿ ಜಡೆಯಾಗಿತ್ತು. ಆ ಎರಡೂ ಜಡೆಗಳನ್ನು ಅಮ್ಮ ಎಷ್ಟು ಚೆನ್ನಾಗಿ ಬಾಚಿಕೊಟ್ಟರೂ ಕಡಿಮೆಯೆ. ಒಂದು ಕೂದಲು ಹರಡಬಾರದಿತ್ತು. ಗುಂಗುರು ಕೂದಲು ಹೀಗೆ ಕೂರಿಸಿದರೆ ಹಾಗೆ ಎದ್ದು ಹಾರಾಡುತ್ತಿತ್ತು. ನನ್ನೊಳಗಿನ ಸಂಭ್ರಮದಂತೆ ! ಅದಕ್ಕೆ ಡೇರೆ ಹೂವು ಇರಲೇಬೇಕು. ಒಂದು ದೊಡ್ಡದು ಇಲ್ಲ ಎರಡು ಚಿಕ್ಕ ಹೂಗಳನ್ನು ಕೊಯ್ದು ಅದನ್ನು ಸರಿಯಾಗಿ ಮುಡಿಸಿಕೊಡುವವರೆಗೂ ನೆಮ್ಮದಿ ಇಲ್ಲ.
ಅರ್ಧಗಂಟೆಗೂ ಹೆಚ್ಚು ಕಾಲ ಆರತಿ ನಡೆಯುತ್ತಿತ್ತು. ಆ ಆರತಿಗೆ ಆರತಿತಟ್ಟೆ ಬರೆಯುವುದು, ಅಲಂಕರಿಸುವುದು ಬಹಳ ಸುಂದರ ಅನುಭವವಾಗಿತ್ತು. ಊರಿನ ಹೆಗಡೆ ಮನೆಯಲ್ಲೆಂತೂ ಆರತಿ ತಟ್ಟೆಯಲ್ಲಿ ಕಲಾಸರಸ್ವತಿಯೇ ಆವಿರ್ಭವಿಸಿದ್ದಾಳೇನೊ ಎನ್ನುವ ಹಾಗೆ ಚಿತ್ರಣಗಳಿರುತ್ತಿದ್ದವು. ಈ ಅವಧಿಯಲ್ಲಿ ನಾನೂ ಆರತಿತಟ್ಟೆ ಮಾಡುವುದನ್ನು ಕಲಿತೆ. ಮಧ್ಯಾಹ್ನ ನಮ್ಮಗಳ ಅಲಂಕಾರಕ್ಕೂ ಮುಂಚೆ ಆರತಿತಟ್ಟೆಗಳು ಸಿದ್ಧವಾಗಿರುತ್ತಿದ್ದವು.
ಸಂಜೆ ಐದುವರೆಗೆಲ್ಲ ಊರವವರು ಬರುತ್ತಿದ್ದರು. ಬಂದ ಕೂಡಲೆ ನೈವೇದ್ಯ ಮಂಗಳಾರತಿ. ಜಾಗಟೆ ಬಾರಿಸುವುದರ ವೈವಿಧ್ಯ, ಪಟಾಕಿಗಳು, ಪಟಾಕಿಗಳನ್ನು ಹಚ್ಚುವ ವೈವಿಧ್ಯ, ಹೊಸಬಟ್ಟೆಗಳು, ಅಲಂಕಾರಗಳು, ಜನರು ಎಲ್ಲವೂ ವೈವಿಧ್ಯಮಯ. ನನಗಂತೂ ನೋಡಲು, ಕಲಿಯಲು, ಅನುಭವಿಸಲು ದೇವರು ಕೊಟ್ಟ ಯಾವ ಅಂಗಗಳೂ ಕಡಿಮೆಯಾಗಿದ್ದಂತೆ ಅನಿಸುತ್ತಿತ್ತು. ಹೀಗೆ ಸಂಭ್ರಮ ಗಣಪತಿಯನ್ನು ಕರೆಸುವ ಮನೆಯಿಂದ ಮನೆಗೆ ಸಾಗಿ ಕೊನೆಯಲ್ಲಿ ದೇವಸ್ಥಾನದಲ್ಲೊ, ಹೆಗಡೆ ಮನೆಯಲ್ಲೊ ಮುಗಿಯುತ್ತಿತ್ತು.(ಸರಿಯಾಗಿ ನೆನಪಿಲ್ಲ). ಅಷ್ಟೊತ್ತಿಗೆ ರಾತ್ರಿ 8 ಗಂಟೆ ಸರಿಯುತ್ತಿತ್ತು. ಈಗ ಗೌರಿ, ಗಣಪತಿಯನ್ನು ಕಳಿಸುವ ಸಂಭ್ರಮ.
ಗೌರಿ, ಗಣಪತಿಗೆ ಮತ್ತೊಮ್ಮೆ ನಮಿಸಿ, ತಮ್ಮ ಸೇವೆಯಲ್ಲಿ ಕಡಿಮೆಯಾಗಿದ್ದರೆ ಕ್ಷಮಿಸಿ, ಮುಂದಿನವರ್ಷವೂ ಬನ್ನಿ ಎಂದು ಬಿನ್ನೈಸಿ ವಿಸರ್ಜನೆ ಮಾಡಲಾಗುತ್ತಿತ್ತು. ಕತ್ತಲೆಯಲ್ಲಿ ಒಬ್ಬರು ಟಾರ್ಚ್ ಹಿಡಿದು ಬೆಳಕ ತೋರಿದರೆ, ಮತ್ತೊಬ್ಬರು ಗಣಪತಿಯನ್ನು ಹೊತ್ತು ತರುತ್ತಿದ್ದರು. ಎಲ್ಲರೂ ಊರಿನ ತೋಟದಲ್ಲಿದ್ದ ಗಣಪತಿ ಮುಳುಗಿಸುವುದಕ್ಕಾಗಿಯೇ ಇದ್ದ ಕೆರೆಯ ಹತ್ತಿರ ಸೇರುತ್ತಿದ್ದರು. ಈಗ ಮತ್ತೊಮ್ಮೆ ಸಂಭ್ರಮ ಮುಗಿಲುಮುಟ್ಟುತ್ತಿತ್ತು. ಈಗ ನಾವು ಹೆಣ್ಣುಮಕ್ಕಳೂ ಜಾಗಟೆ ಬಡಿಯುವ ಸ್ಪರ್ಧೆ ಮಾಡುವುದಿತ್ತು. ಕತ್ತಲಲ್ಲಿ ಗ್ಯಾಸ್ ಲೈಟ್ ಬೆಳಕಲ್ಲಿ ತೋಟದ ಆ ನೋಟ ಧರೆಯ ಸ್ವರ್ಗದಂತೆ ಭಾಸವಾಗುತ್ತಿತ್ತು. ಗಣಪತಿ ಬೊಪ್ಪ ಮೂರಯ, ಮಂಗಳ ಮೂರ್ತಿ ಮೂರಯ ಎನ್ನುವ ಘೋಷ ಮುಗಿಲುಮುಟ್ಟಿದ ನಂತರ ಒಬ್ಬೊಬ್ಬರೇ ಸಂಭ್ರಮದ ಮನಸ್ಥಿತಿಯಿಂದ ಹೊರಬರಲೂ ಆಗದೆ, ಹಬ್ಬ ಮುಗಿದ ವಾಸ್ತವ ಒಪ್ಪಿಕೊಳ್ಳಲೂ ಆಗದೆ ಬಹಳ ಹೊತ್ತು ಮೌನಕ್ಕೆ ಶರಣಾಗುತ್ತಿದ್ದರು. ಅರ್ಧ ಗಂಟೆಯ ಮೊದಲು ಇದ್ದ ಮಾತು, ಹಾಡು, ಜಾಗಟೆ ಧ್ವನಿ ಎಲ್ಲಾ ಈಗಿಲ್ಲವಾಗಿ ಇಡೀ ಊರು ಮೌನವಾಗುತ್ತಿತ್ತು. ಮರುದಿನ ಮತ್ತೆ ಮತ್ತೊಂದು ಹಬ್ಬದ ತಯಾರಿ ಶುರುವಾಗುತ್ತಿತ್ತು. ಆಚರಿಸುವವರು, ಪಾಲ್ಗೊಳ್ಳುವವರು ಇಬ್ಬರೂ ಸಮಾನವಾಗಿ ಅನುಭವಿಸುತ್ತಿದ್ದ ಅನುಭಾವ ಬೆಂಗಳೂರಿನ ಯಾವ ಹಬ್ಬಗಳೂ, ಪಾರ್ಟಿಗಳೂ ನನಗೆ ನೀಡಿಲ್ಲ. ಎಲ್ಲರಿಗೂ ಹಾಗೆಯೊ, ನನಗೊಬ್ಬಳಿಗೆ ಮಾತ್ರ ಹಾಗನಿಸುತ್ತದೊ? ನಾನೆಂತೂ ನನ್ನ ನೆಚ್ಚಿನ ಹಬ್ಬಕ್ಕೆ ಕಾದಿರುತ್ತಿದ್ದೆ. ಹಗಲು ರಾತ್ರಿ ಎರಡೂ ಹೊತ್ತು ನಡೆಯುತ್ತಿದ್ದ ಹಬ್ಬ ನನಗೆ ಅವಿಸ್ಮರಣೀಯವಾದದ್ದನ್ನು ಹೊತ್ತು ತರುತ್ತಿತ್ತು.
ನಾಳೆಗೆ.....
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ