ನವರಾತ್ರಿಯ ಎರಡು ಸ್ವಾರಸ್ಯಕರ ಘಟನೆಗಳು

ನವರಾತ್ರಿಯ ಎರಡು ಸ್ವಾರಸ್ಯಕರ ಘಟನೆಗಳು -

೧. ನನಗೆ ಗುಂಗುರು ಕೂದಲಾದ್ರೂ ಬಹಳ ದಪ್ಪ, ಉದ್ದನೆಯ ಕೂದಲಿತ್ತು. ಸೋಮವಾರ ಆಯಿ ತಲೆ ಸ್ನಾನ ಮಾಡುತ್ತಾಳೆಂದು ನಾನೂ ತಲೆಸ್ನಾನ ಮಾಡಿಸಿಕೊಳ್ಳುತ್ತಿದ್ದೆ. ಉದ್ದನೆಯ ಕೂದಲು ಬೆನ್ನು ಮುಗಿಸಿ ಮುಂದೆಯೂ ಮುಚ್ಚಿಕೊಳ್ಳುತ್ತಿತ್ತು. ಭಸ್ಮವೆಂದರೆ ನನಗೆ ಬಹಳ ಇಷ್ಟ. ಅದನ್ನು ಯಥೇಚ್ಛ ಹಚ್ಚಿಕೊಂಡು ದೊಡ್ಡ ಕುಂಕುಮ ಇಟ್ಟುಕೊಂಡು ಊರೆಲ್ಲ ಓಡಾಡುತ್ತಿದ್ದೆ. ಬಂತು ನೋಡು ಅಕ್ಕಮಹಾದೇವಿ ಎನ್ನುತ್ತಿದ್ದರು ಕೆಲಹಿರಿಯರು. ನನಗೆ ಏನೂ ಗೊತ್ತಾಗುತ್ತಿರಲಿಲ್ಲ ಮೊದಮೊದಲು. ಆಮೇಲೆ ಅವಳ ಜಾಡು ಹಿಡಿದು ಜಾಲಾಡಿಸಿದ ನಂತರ ಅದೊಂದು ಹೆಮ್ಮೆಯ ವಿಷಯವಾಯ್ತು. ಹೀಗಿರುವಾಗ ಅಪ್ಪನಿಗೆ ಮಗಳಿಗೆ ಕಾಲ್ಗೆಜ್ಜೆ ಮತ್ತು ಮೂಗಿಗೆ ರಿಂಗು ತೊಡಿಸುವ ಆಸೆ. ಪಾಪ ಎಷ್ಟೋ ಕಷ್ಟ ಪಟ್ಟು ಕೊಡಿಸಿಯೇಬಿಟ್ಟ. ಒಂದು ನವರಾತ್ರಿಯ ದಿನ, ಮಧ್ಯಾಹ್ನ ಊರಿನ ಕುಮಾರಿ ಹಸ್ತೋದಕ ಕಾರ್ಯಕ್ರಮ ಮುಗಿಸಿ ಮನೆಗೆ ಬಂದೆನೊ ಇಲ್ಲವೊ. ಆಯಿ ಬಯ್ದು ಒಂದೇ ಸಮನೆ ಮೊದಲು ಮುಖ ತೊಳಿ, ನಿಮ್ಮಪ್ಪನಿಗೆ ಬುದ್ದಿಲ್ಲ. ಮೂಗಿಗೆ ರಿಂಗು ಯಾಕೆ ಬೇಕಿತ್ತು ಎಂದು ತೆಗೆಸಿ ಆ ಕೂಡಲೇ ರಂಧ್ರ ಮುಚ್ಚಬಾರದೆಂದು ತುಳಸಿಕಡ್ಡಿ ಹಾಕಿದಳು. ಕೊನೆಗೆ ಗೊತ್ತಾದ ವಿಷಯವೆಂದರೆ ಆ ಕೂದಲು, ಅರಿಶಿಣ ಕುಂಕುಮ, ವಿಭೂತಿಯ ಜೊತೆಗೆ ಮೂಗಿನ ಥಳಥಳಿಸುವ ದೇವಿಗೆ ಹಾಕುವ ರಿಂಗು ಸೇರಿ ನಾನು ಸಾಕ್ಷಾತ್ ದೇವಿಯ ಹಾಗೆ ಕಾಣುತ್ತಿದ್ದೆನಂತೆ! ಬಹುಶ ಅವತ್ತೇ ನನಗೆ ದೇವರು ಯಾಕೆ ಕಣ್ಣಿಗೆ ಬೀಳೊಲ್ಲ ಎನ್ನುವ ಪ್ರಶ್ನೆಗೆ ಉತ್ತರ ದೊರೆತಿದ್ದು. ಕಲ್ಪನೆಯನ್ನೇ ಜೀರ್ಣಿಸಿಕೊಳ್ಳಲು ಅಸಹಾಯಕರಾದ ಮನುಷ್ಯರೇ ಹೆಚ್ಚಿರುವಾಗ ನಿಜವಾಗಿ ಪ್ರತ್ಯಕ್ಷವಾದರೆ ಗತಿ ಏನು?

೨. ಒಮ್ಮೆ ಹೀಗಾಯ್ತು.‌ನನ್ನನ್ನು ನವೋದಯಕ್ಕೊ, ಕಿತ್ತೂರು ಚೆನ್ನಮ್ಮ ಶಾಲೆಗೊ ಹಾಕುವ ಯೋಚನೆ ಮಾಡಿದ್ದ, ನನ್ನ ಮೂರನೇ ಮಾವ. ನಾವು ಕಾಡಿನ ಮನೆಗೆ ಶಿಫ್ಟ್ ಆದಾಗ ಮಳೆಗಾಲದಲ್ಲಿ ಶಾಲೆಗೆ ಹೋಗುವ ದಾರಿ ನೀರಿನಿಂದ ಮುಚ್ಚಿ ಬಂದಾಗುತ್ತಿತ್ತು. ಹಾಗಾಗಿ ಈ ಅಜ್ಜನಮನೆ ಊರಿನ ಸರ್ಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆ ಬಹಳ ಚೆನ್ನಾಗಿದೆ ಎಂದು ಕರೆದೊಯ್ದು ಸೇರಿಸಿದ್ದ. ಈಗ ರೆಸಿಡೆನ್ಷಿಯಲ್ ಸ್ಕೂಲ್ ಗೆ ಹಾಕುವ ಸಲುವಾಗಿ ಅರ್ಜಿ ತುಂಬಬೇಕಿತ್ತು. ಅದಕ್ಕೆ ನನ್ನ ಫೋಟೊ ಬೇಕಿತ್ತು. ಆ ಫೋಟೊ ತೆಗೆಸಲು ಶಿರಸಿ ಶ್ರೀ ರಾಜ್ ಸ್ಟುಡಿಯೊಗೆ ನಾನು, ಮಾವ ಹೋದೆವು. ಒಮ್ಮೆ ಕನ್ನಡಿ ನೋಡ್ಕೆಂಬಾರೆ ತಂಗಿ ಅಂದ. ನಾನು ಒಂದೂವರೆ ವರ್ಷದಿಂದ ನೋಡಿಕೊಳ್ಳಲು ಇಷ್ಟಪಡದ ಕನ್ನಡಿ ಅವತ್ತು ನನ್ನನ್ನು ಬಹಳ ಚೆಂದಗೆ ತೋರಿಸಿತು. ಬಂದು ಏನಾಗಿದೆ, ಗೊತ್ತಾಗಲಿಲ್ಲ ಎಂದೆ. ಕ್ಯಾಮರಾದವ ನಿನ್ನೆರಡೂ ಜಡೆಗೆ ಹೂ ಬೇಡ. ನಿನ್ನ ಮುಖನೇ ಕಾಣುವುದಿಲ್ಲ ಎಂದು ನಗುತ್ತ ಒಂದು ಕಡೆಯ ಹೂ ತೆಗೆಸಿ ಫೋಟೊ ಕ್ಲಿಕ್ಕಿಸಿದ. ಮನೆಗೆ ಬಂದ ಮೇಲೆ ಶೀಲಾ ಹೂ ಮುಡಿದ ಹಾಗೆ ಎಂಬುದೇ ಒಂದು ಸಾಲಾಯಿತು!
ಈ ಜಡೆ, ಕೂದಲು, ಕಿತ್ತೂರು ಶಾಲೆ ಕತೆಗಳನ್ನು ಮುಂದಿನ ಭಾಗಗಳಲ್ಲಿ ಹೇಳ್ತೀನಿ.
ಎಲ್ಲರಿಗೂ ವಿಜಯದಶಮಿ ಹಬ್ಬದ ಶುಭಾಶಯಗಳು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅನನ್ಯ ದೀಪಾವಳಿ

ಕತ್ತಲೆಯ ಮತ್ತೊಂದು ಮುಖ