ಅನನ್ಯ ದೀಪಾವಳಿ
ಅನನ್ಯ ದೀಪಾವಳಿ
ನಮ್ಮ ಕಡೆ ದೀಪಾವಳಿಗಿಂತ ದೊಡ್ಡ ಹಬ್ಬ ಬೇರೊಂದಿಲ್ಲ. ಕತ್ತಲ ರಾತ್ರಿ ನರಕಚತುರ್ದಶಿಯ ಮುಂಚಿನ ದಿನ. ಅವತ್ತು ಬೆಳಗಿನಂತೆ ಸಂಭ್ರಮ. ಮನೆಯ ಹೊಸ್ತಿಲಿನಿಂದ ಹಿತ್ತಲವರೆಗೆ ಕೆಮ್ಮಣ್ಣು ಹಚ್ಚಿ ಶೇಡಿ ಬಿಡಿಸುವ ಸಂಭ್ರಮ. ಆಯುಧ ಪೂಜೆಗೆ ಕೃಷಿ ಹಾಗೂ ಪಾಕಶಾಲೆಯ ಹತ್ಯಾರಗಳನ್ನು ಸ್ವಚ್ಛ ಮಾಡುವುದಿದ್ದರೆ ಮಾಡಿ, ಕಲಾಯಿ, ಸಾಣೆ ಎಲ್ಲಾ ಬೇಕಿದ್ದರೆ ಹಾಕಿಸಿ ಸಿದ್ಧಗೊಳಿಸಲಾಗುತ್ತಿತ್ತು. ಹಸು, ಕರುಗಳಿಗೆ ಹಾಕಲು ವಿಶೇಷ ಹಾರಗಳನ್ನು ತಯಾರಿಸಲಾಗುತ್ತಿತ್ತು. ಅವುಗಳನ್ಮು ಹಣ್ಣಡಿಕೆ (ಗೋಟಡಿಕೆ) ,ಅಡಿಕೆಯ ಸಿಂಗಾರ, ವೀಳ್ಯದೆಲೆ ಮತ್ತು ಪಚ್ಚತೆನೆಗಳನ್ನು ಹಾಕಿ ವಿಶೇಷವಾದ ಪುಂಡಿದಾರದಲ್ಲಿ ಹಾರ ತಯಾರು ಮಾಡುತ್ತಿದ್ದರು. ಪುಂಡಿ ಮರದ ತೊಗಟೆಯಿಂದ ತೆಗೆಯಲಾದ ಈ ದಾರ, ಹಾಗೂ ಉಳಿದ ವಸ್ತುಗಳು ಹಸುಗಳು ತಿಂದರೂ ಏನೂ ಕೆಡುಕಾಗುತ್ತಿರಲಿಲ್ಲ. ಬದಲಿಗೆ ಪಚ್ಚತೆನೆ, ಸಿಂಗಾರದಂತವು ಔಷಧಿ ಮತ್ತು ಪೌಷ್ಟಿಕ ಆಹಾರವಾಗಿರುತ್ತಿದ್ದವು. ಸಂಜೆಯಿಂದ ಕೆಮ್ಮಣ್ಣು ಶೇಡಿಯ ಚಿತ್ತಾರ ಆರಂಭವಾಗಿ ರಾತ್ರಿಯ ಹೊತ್ತಿಗೆ ಮುಗಿಯುತ್ತಿತ್ತು. ರಾತ್ರಿ ದೊಡ್ಡ ಮೊಗೆಕಾಯಿ (ಮಂಗಳೂರು ಸೌತೆಕಾಯಿ ಜಾತಿಯ ತರಕಾರಿ), ಒಂದು ಬಲಿತ ಸೌತೆಕಾಯಿಯನ್ನು ಬಲಿ ಚಕ್ರವರ್ತಿ ಮತ್ತು ಆತನ ಪತ್ನಿಯ ರೂಪದಲ್ಲಿ ಅಲಂಕರಿಸುವ ಕೆಲಸ. ಆ ಕಪ್ಪು ಹಸಿರಿನ ಮೊಗೆಕಾಯಿಗೆ ಮಸಿಕೆಂಡದಲ್ಲಿ ದೊಡ್ಡ ಮೀಸೆ ಕಣ್ಣು, ಮೂಗು, ಬಾಯಿ ಬಿಡಿಸಿದರೆ, ಸೌತೆಕಾಯಿಗೆ ಕಣ್ಣು, ಮೂಗು, ಬಾಯಿ, ಕುಂಕುಮ ಬಿಡಿಸಲಾಗುತ್ತಿತ್ತು. ಗಂಡಿನ ಮೀಸೆ, ಹೆಣ್ಣಿನ ಕುಂಕುಮ ನನಗೆ ಸೋಜಿಗವೂ, ಹಲವು ಕುತೂಹಲಗಳಿಗೂ ಕಾರಣವಾಗಿದ್ದವು.
ದೊಡ್ಡತ್ತೆ ಇರುವವರೆಗೆ ಈ ಕೆಲಸ ಅತ್ತೆಯದಾಗಿತ್ತು. ಅವರು ಬೇರೆ ಊರಿಗೆ ಹೋದಮೇಲೆ ಅದು ನನ್ನ ಕೆಲಸವಾಯ್ತು. ಅಂತೂ ರಾತ್ರಿ ಹತ್ತು, ಹನ್ನೊಂದು ಗಂಟೆಗೆ ಎಲ್ಲಾ ಮುಗಿಸಿ ಮಲಗುತ್ತಿದ್ದೆವು. ಬೆಳಿಗ್ಗೆ ೫ಕ್ಕೆಲ್ಲ ದೊಡ್ಡತ್ತೆ ಎದ್ದಿರುತ್ತಿದ್ದಳು. ಅವಳ ಬೆನ್ನಿಗೆ ನಾನು ಎದ್ದು ಆಕೆ ಹಾಕುತ್ತಿದ್ದ ಸುಂದರ ರಂಗೋಲಿಗಳನ್ನು ಬಾಗಿಲಿನಿಂದ ಬಾಗಿಲಿಗೆ ನೋಡುತ್ತ ಹೋಗುವುದು, ಅವುಗಳನ್ನು ಕಲಿಯುವುದು ನನಗೆ ಖುಷಿಯ ವಿಷಯವಾಗಿತ್ತು. ಒಂದು ವೇಳೆ ಒಂದೊಂದು ಹಬ್ಬದಲ್ಲಿ ಮಲಗಿಬಿಟ್ಟಿದ್ದರೆ ೬ ಗಂಟೆಯ ಹೊತ್ತಿಗೆಲ್ಲ ತಲೆಸ್ನಾನ ಮಾಡಿ ಗಂಗೆ ತುಂಬುವ ಹೊತ್ತಿಗೆ ಅತ್ತೆ ನನ್ನನ್ನು ಎಬ್ಬಿಸುತ್ತಿದ್ದಳು. ಅವಳ ಗಂಗೆ ತುಂಬುವ ಕಾರ್ಯಕ್ರಮಕ್ಕೆ ನನ್ನ ಹಾಡು, ಜಾಗಟೆಗಳು ಸಹಯೋಗ ನೀಡುತ್ತಿದ್ದವು. ಅಕ್ಕಪಕ್ಕದ ಮನೆಗಳಿಗೆ ನಮ್ಮ ಮನೆಯಲ್ಲಿ ಗಂಗೆ ತುಂಬಿ ಆಗಿದೆ ಎಂದು ಗೊತ್ತಾಗುತ್ತಿತ್ತು. ಹೈಸ್ಕೂಲಿನಲ್ಲಿರುವಾಗ ಮನೆಯ ದೀಪಾವಳಿಯಲ್ಲಿ ಅಮ್ಮ ಗಂಗೆಯನ್ನು ತಡವಾಗಿ ೭-೮ ಗಂಟೆಗೆ ತುಂಬುತ್ತಿದ್ದಳು. ಅತ್ತೆ ನಲ್ಲಿ ಪೂಜೆ ಮಾಡಿದರೆ, ಅಮ್ಮ ಬಾವಿ ಪೂಜೆ ಮಾಡುತ್ತಿದ್ದಳು. ನನಗೆ ಅತ್ತೆ ಅಷ್ಟು ಬೆಳಿಗ್ಗೆ ಅತ್ತೆ ಬಾವಿ ಪೂಜೆಯನ್ನು, ಅಮ್ಮ ಬಾವಿ ಪೂಜೆಯನ್ನೇ ಸ್ವಲ್ಪ ಬೇಗವೂ ಮಾಡಿದ್ದರೆ ಚೆನ್ನಾಗಿರುತ್ತಿತ್ತು ಅನಿಸುತ್ತಿತ್ತು. ಬೆಳಕು ಹರಿಯುವ ಮುನ್ನದ ಗಾಢ ಕತ್ತಲೆ ನನಗೆ ಅವತ್ತೂ, ಇವತ್ತೂ ಯಾವತ್ತೂ ಇಷ್ಟ. ಹಾಗೆ ನಲ್ಲಿಗಿಂತ ಬಾವಿ ಸಹ ನನಗೆ ಆಪ್ತ. ಕತ್ತಲಲ್ಲಿ ನಡೆಯುವ ಹಬ್ಬಗಳಲ್ಲಿ ಈ ಹಬ್ಬದ ಹೊತ್ತು ನನಗೆ ಎಲ್ಲಕ್ಕಿಂತ ಇಷ್ಟವಾಗಿತ್ತು.
ನಾಳೆಗೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ