ಕತ್ತಲೆಯ ಮತ್ತೊಂದು ಮುಖ

 ಕತ್ತಲೆಯ ಮತ್ತೊಂದು ಮುಖ

ಬದುಕು ಸಮಯಾತೀತ ಎನ್ನುವ ಪಾಠ ಕಲಿತು ಮತ್ತೆ ಅಜ್ಜಿಯ ಮನೆ ಕಡೆ ಬಂದಾಗ ಸಂಜೆಗಳ ಆಟ, ಟಿವಿಯ ಜೊತೆಗೆ ಇನ್ನೊಂದು ಕೆಲಸವಿತ್ತು. ಹಾಲು ಕೊಡುವುದು. ಮನೆಯಲ್ಲಿ ಕರೆಯುವ ಹಸುವಿದ್ದಾಗ ಒಂದೊ ಎರಡೊ ಲೀಟರ್ ಹಾಲನ್ನು ಡೈರಿಗೆ ಕೊಡುತ್ತಿದ್ದರು. ಡೈರಿ ಸುಮಾರು 1 ಕಿ.ಮೀ ದೂರ. ಹಿಂದಿನ ಸಂಚಿಕೆಯಲ್ಲಿ ವಿವರಿಸಿದ ಕೆಳಗಿನ ಕೇರಿಯ ವಿರುದ್ಧ ದಿಕ್ಕು. ಇದು ಶಿರಸಿ, ಸಿದ್ಧಾಪುರ ತಾಲೂಕನ್ನು ಸೇರಿಸುವ ರಸ್ತೆಗೆ ತಾಗಿತ್ತು. ಈ ಡೈರಿಗೆ ಹಾಲು ಕೊಡುವಾಗ ಸಂಜೆ 6 ಗಂಟೆಯ ಮೇಲಾಗುತ್ತಿತ್ತು. ಕತ್ತಲೆಯಲ್ಲಿ ರಸ್ತೆಯ ವಾಹನಗಳ ಬೆಳಕಿನಲ್ಲಿ ನಡೆದು ಹಾಲು ಕೊಟ್ಟು ಬರುತ್ತಿದ್ದೆ.‌ಮಧ್ಯ ಕೆಲವೊಮ್ಮೆ ಬ್ಯಾಟರಿ ಜೊತೆಯಾಗಿತ್ತು. ಅಮ್ಮ ಹೊಡೆದು ಹೆದರಿಸಿದ್ದ ಕತ್ತಲೆಯ ಭಯ ಹೋಗಿದ್ದು ಇದೂ ಒಂದು ಕಾರಣಕ್ಕೆ. ವಾಹನಗಳನ್ನು ತಪ್ಪಿಸಿಕೊಂಡು ರಸ್ತೆ ದಾಡುವುದನ್ನು ಎರಡೂ ಹಳ್ಳಿ ಪೇಟೆಗಳು 6-7 ವರ್ಷಗಳಿಗೆಲ್ಲ ಕಲಿಸಿದ್ದವು. ಡೈರಿಗೆ ಹೋಗುವುದೂ ಹೊಸತಾಗಿರಲಿಲ್ಲ. ನನ್ನನ್ನು ಸ್ವತಂತ್ರ ಮಾಡಬೇಕೆಂಬ ಅಮ್ಮ, ಅಪ್ಪ ಹಿಂದಿನ ಊರಿನಲ್ಲೇ ಡೈರಿಯಿಂದ ಹಾಲು, ಪೇಪರು ತರಿಸುತ್ತಿದ್ದರು. ಅಪ್ಪ, ಅಮ್ಮನ ಮಾತೆಂದರೆ ವೇದವಾಕ್ಯವಾಗಿದ್ದ ನನಗೆ ಆ ಕೆಲಸ ಬೇಸರವೆನಿಸಿರಲಿಲ್ಲ. ಈಗ ಕತ್ತಲೂ ನನಗೆ ಬೇಸರವನ್ನಾಗಲಿ, ಹೆದರಿಕೆಯನ್ನಾಗಲೀ ಮೂಡಿಸಲಿಲ್ಲ. ಅಥವಾ ನನ್ನ ಸಹಪಾಠಿಗಳೆಲ್ಲ ಆರಾಮಾಗಿದ್ದಾರೆ ನಾನು ಮಾತ್ರ ಇಷ್ಟೊಂದು ಕೆಲಸ ಮಾಡಬೇಕಲ್ಲ ಎಂಬ ಯೋಚನೆ ಬರುತ್ತಿರಲಿಲ್ಲ. ಅಷ್ಟು ಕೆಲಸ ಮಾಡಿಯೂ ಮಾತು ಮಾತಿಗೆ ದೊಡ್ಡವರ ಮೂದಲಿಕೆ ಬಹಳ ದುಃಖವನ್ನು ತರುತ್ತಿತ್ತು. ಏನೂ ಎದುರಾಡುತ್ತಿರಲಿಲ್ಲ. ಸುಮ್ಮನೆ ನನ್ನೊಳಗೇ ಅತ್ತುಕೊಂಡು ಸುಮ್ಮನಾಗುತ್ತಿದ್ದೆ. ಇದು ಕತ್ತಲೆಯ ಇನ್ನೊಂದು ಮುಖ.
ನಾವು ತೋಟದ ಮನೆಗೆ ಬಂದ ಹೊಸತರಲ್ಲಿ ಹಾವುಗಳ ಕಾಟ ಅಷ್ಟಿರಲಿಲ್ಲ. ಒಂದೆರಡು ವರ್ಷ ಆಗಿರಬಹುದು. ಮನೆಯಲ್ಲಿ ಹಾವುಗಳು ಯಾವ ರೀತಿ ಬರುತ್ತಿದ್ದವೆಂದರೆ ನಾವು ಅವುಗಳ ಮನೆಯಲ್ಲಿದ್ದೇವೊ ಅವು ನಮ್ಮ ಮನೆಯಲ್ಲೊ ಎನ್ನುವ ಹಾಗೆ. ಇನ್ನೂ ವಿಚಿತ್ರವೆಂದರೆ ನಾನು ಮನೆಗೆ ಹೋದಾಗ ಈ ಹಾವಿನ ಕಾಟ ಜಾಸ್ತಿಯಾಗಿತ್ತು. ಒಂದು ಕೇರೆ ಹಾವಂತೂ ಮನೆಯಲ್ಲಿ ಬೆಕ್ಕು ಸಾಕಿದ ಹಾಗೆ. ಒಮ್ಮೆ ರಾತ್ರಿ ಚಿಮಣಿ ಬೆಳಕಲ್ಲಿ ಊಟ ಮಾಡುತ್ತಿದ್ದೆವು. ಪಕ್ಕದ ದೇವರ ಮನೆಯಲ್ಲಿ ದೊಪ್ಪನೆ ಬಿದ್ದ ಸದ್ದು.‌ನೋಡಿದರೆ ದೊಡ್ಡ ಕುದುರುಬಳ್ಳ ಹಾವು ಇಲಿಯೊಂದನ್ನು ಬಾಯಲ್ಲಿ ಕಚ್ಚಿಕೊಂಡು ಬಿದ್ದಿದೆ.
ನಾನು, ತಂಗಿ ಗಾಬರಿಯಾದರೆ ಅಮ್ಮ ತಣ್ಣಗೆ ಹೋಗಿ ರೂಮಿನ ಬಾಗಿಲು ಹಾಕಿದಳು. ಆರಾಮವಾಗಿ ಬಂದು ಊಟ ಮಾಡಿ ಕೈತೊಳೆದು ಕೋಲು ತಂದು ಹೊಡೆದು ಹೊರಹಾಕಿದಳು. ಅಮ್ಮನ ಸ್ಥಿತಪ್ರಜ್ಞತೆ ನನ್ನ ಮೇಲೆ ಮತ್ತೊಂದು ಅಚ್ಚು ಮೂಡಿಸಿತು.‌ಇವತ್ತಿಗೂ ಎಂತಹ ಒತ್ತಡದಲ್ಲೂ ನನ್ನ ಧೃತಿಗೆಡದ ಮನಸ್ಥಿತಿಗೆ ಈ ಘಟನೆಯೂ ಒಂದು ಕಾರಣ.

ಮುಂದುವರೆಯುವುದು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅನನ್ಯ ದೀಪಾವಳಿ

ನವರಾತ್ರಿಯ ಎರಡು ಸ್ವಾರಸ್ಯಕರ ಘಟನೆಗಳು