ಶರನ್ನವರಾತ್ರಿಯ ಸವಿನೆನಪುಗಳು

ಶರನ್ನವರಾತ್ರಿಯ ಸವಿನೆನಪುಗಳು

ಪ್ರೀತಿಯ ಓದುಗರಿಗೂ, ಎಲ್ಲಾ ಸ್ನೇಹಿತರಿಗೂ ಶರನ್ನವರಾತ್ರಿಯ ಹಾರ್ದಿಕ ಶುಭಕಾಮನೆಗಳು.

ಈಗ ಶರನ್ನವರಾತ್ರಿಯ ಹಬ್ಬಕ್ಕೆ ಬರೋಣ. ಶರನ್ನವರಾತ್ರಿ ಹಾಡು, ರಂಗೋಲಿ, ಹು ಕಟ್ಟುವುದು, ಕುಮಾರಿ ದಕ್ಷಿಣೆ ಡಬ್ಬಿ, ಅರಿಸಿಣ ಕುಂಕುಮ, ಡೇರೆ ಮತ್ತು ಗೆಂಟಿಗೆ (ಸ್ಪಟಿಕ) ಹೂವಿನ ನೆನಪುಗಳ ಸವಿ ಎರೆಯೇವು (ದೇವಿಯ ನೈವೇದ್ಯಕ್ಕೆ ಮಾಡುವ ವಿಶೇಷ ತಿಂಡಿ).
ವರ್ಷವೂ ಅಜ್ಜನಮನೆಯಲ್ಲಿ ಹಗಲು ಮೂರು ನವರಾತ್ರಿ ನಡೆಯುತ್ತಿತ್ತು. ಊರಿನಲ್ಲಿ ಆಯಿಯ ಅಕ್ಕನ ಮನೆಯಲ್ಲಿ ಮತ್ತು ಹೆಗಡೆ ಮನೆಯಲ್ಲಿ ಒಂಭತ್ತು ದಿನಗಳ ರಾತ್ರಿ ಪೂಜೆ ಜರುಗುತ್ತಿತ್ತು. ಮತ್ತೊಂದು ಊರಿನಲ್ಲಿದ್ದ ಅಜ್ಜಿಯ ಮನೆಯಲ್ಲಿ ಒಂಭತ್ತು ದಿನಗಳಲ್ಲಿ ಒಂದು ದಿನ ಮುತ್ತೈದೆಯರ ಊಟ ನಡೆಯುತ್ತಿತ್ತು. ಎಲ್ಲಾ ಕಡೆ ದೇವಿಯ ಯಥಾಶಕ್ತಿ ಕಲ್ಪೋಕ್ತಪೂಜೆ ನಡೆಯುತ್ತಿತ್ತು. ಈ ಎಲ್ಲರ ಮನೆಯಲ್ಲೂ ಪುರೋಹಿತರ ಮಾರ್ಗದರ್ಶನ ಮತ್ತು ಮಂತ್ರದಲ್ಲೇ ಪೂಜೆ. (ಇದು ನನಗೆ ಮೊದಮೊದಲು ಅಷ್ಟು ಅರ್ಥವಾಗದಿದ್ದರೂ ನಂತರದ ದಿನಗಳಲ್ಲಿ ಅಸಮಾಧಾನಕ್ಕೆ ಕಾರಣವಾಯಿತು. ಯಾಕೆ ಎನ್ನುವುದನ್ನು ಮುಂದೆ ಹೇಳುತ್ತೇನೆ)
ಶಾಲೆಗೆ ರಜೆ ಬೇರೆ ಇರುತ್ತಿತ್ತು. ಮಜವೋ ಮಜ. ಈ ಹಬ್ಬಕ್ಕೆ ನೆಂಟರಿಷ್ಟರ ಮಕ್ಕಳೆಲ್ಲ ಸಿಗುತ್ತಿದ್ದುದರಿಂದ ನಮ್ಮನ್ನು ಹಿಡಿಯುವವರೇ ಇರುತ್ತಿರಲಿಲ್ಲ. ಆ ಕ್ಷಣಗಳನ್ನೆಲ್ಲ ಬಾಚಿ ಬದುಕುವ ತುರ್ತುಸ್ಥಿತಿ ಅದು. ಸಂಜೆಯಾಗುತ್ತಿದ್ದ ಹಾಗೆ ಎರಡೂ ಜಡೆಗೆ ಹೂ ಮುಡಿದು ಇರುವುದರಲ್ಲೇ ಹೊಸ ಬಟ್ಟೆ ತೊಟ್ಟು ಹಿರಿಯರು ಯಾರು ಜೊತೆಗೆ ಬರುತ್ತಾರೊ ಅವರೊಂದಿಗೆ ಪೂಜೆ ನಡೆಯುವ ಮನೆಗೆ ಹೋಗುತ್ತಿದ್ದೆವು. ಅಲ್ಲಿ ಪೂಜೆ ಮಾಡುವ ದಂಪತಿ ಪೂಜೆ ಮಾಡುತ್ತಿದ್ದರು. ಉಳಿದ ಹೆಂಗಸರು ಮನೆಯ ದೊಡ್ಡ ಒಲೆಗೆ ಬೆಂಕಿ ಒಟ್ಟಿ ದೇವಿಗೆ ನೈವೇದ್ಯ ಹಾಗೂ ಬರುತ್ತಿದ್ದ ನೆಂಟರಿಗೆ ಊಟ ತಯಾರಿಸುತ್ತಿದ್ದರು. ನಮಗೆ ಮಕ್ಕಳಿಗೆ ಮತ್ತು ಗಂಡಸರಿಗೆ ಆಟ ಮಾಮೂಲಾಗಿತ್ತು. ಗಂಡಸರು ಇಸ್ಪೀಟು ಆಡುತ್ತಿದ್ದರೆ ಮಕ್ಕಳು ನಾವು ಕತೆ ಹೇಳುತ್ತ, ಅದು ಇದು ನೋಡುತ್ತ ಮರಕೋತಿ, ಕಂಬ ಕಂಬ ಆಟ ಆಡುತ್ತಿದ್ದೆವು. ಅಲ್ಲಿ ಕರೆಂಟು ಇರುತ್ತಿತ್ತು . ಆದ್ದರಿಂದ ಯಾವ ಸಮಸ್ಯೆ ಇರಲಿಲ್ಲ. ಮಂಗಳಾರತಿಯ ಹೊತ್ತಿಗೆ ಎಲ್ಲಾ ಸೇರಿ ಆರತಿ ಮುಗಿಸುತ್ತಿದ್ದರು. ಹಾಡು ಹೇಳುವುದು, ಕಲಿಯುವುದು ಎಲ್ಲಾ ಆಗಲೆ. ರಾತ್ರಿ ಊಟಕ್ಕೆ ಭರ್ಜರಿ ಬೇಟೆ ಇರುತ್ತಿದ್ದರಿಂದ ಹೊಡೆದು ಬಂದು ಕತ್ತಲಲ್ಲಿ ಮಧ್ಯರಾತ್ರಿ ದಬ್ಬಾಕಿದರೆ ಬೆಳಕು ಬೇಗ ಬರಲಪ್ಪ ಎಂಬಷ್ಟು ಸಂಭ್ರಮ ಮನೆಮಾಡಿರುತ್ತಿತ್ತು!
ಬೆಳಗಾಗಿ ಹಗಲು ನವರಾತ್ರಿಗೆ ಹೋಗಬೇಕಿತ್ತು. ಪೂಜೆ ಮಾಡುವವರೆಲ್ಲ ನನಗೆ ವಿಶೇಷವಾಗಿ ಕರೆಯುತ್ತಿದ್ದರು. ಕಾರಣವೇನೆಂದರೆ ನನಗೊಂದು ಪಟಾಲಮ್ಮಿತ್ತು. ಮೂರ್ನಾಲ್ಕು ಹೆಣ್ಣು ಕೂಸುಗಳು ಒಂದೇ ಸಲಕ್ಕೆ ಸಿಗುವ ಟೀಂ. ನಾವು ಹೋಗಿ ಸಾಲಾಗಿ ಕುಳಿತು ಕೊಳ್ಳುತ್ತಿದ್ದೆವು. ಮನೆಯ ಹೆಂಗಸರು ಅರಿಸಿಣ, ಕುಂಕುಮ ಹೂ ಕೊಡುತ್ತಿದ್ದರು. ಗಂಡಸರು ದುಡ್ಡು ಕೊಡುತ್ತಿದ್ದರು. ದುಡ್ಡು ಅಂದರೆ ಐದು ಪೈಸೆಯಿಂದ ಎರಡು ರೂಪಾಯಿವರೆಗೆ. ಅವರವರ ಯಥಾಶಕ್ತಿ. ನಾವು ಅದನ್ನು ಒಂದು ಕರಡಿಗೆಗೆ ಹಾಕಿ ದಿನ ಲೆಕ್ಕ ಮಾಡುವುದು ಖುಷಿ ಪಡುವುದು. ಹಬ್ಬ ಮುಗಿದ ಮೇಲೆ ಬೇರೆಯವರು ಯಾವುದಕ್ಕೆ ಖರ್ಚು ಮಾಡುತ್ತಿದ್ದರೊ ಗೊತ್ತಿಲ್ಲ. ನಾನಂತೂ ಮನೆಗೆ ಹೋಗುವ ಬಸ್ ಚಾರ್ಜ್ ಆಯಿತೆಂದೊ, ಎಲ್ಲಾದರೂ ಒಂದು ಪುಸ್ತಕ ಕೊಂಡು ಕೊಳ್ಳುವ ಆಸೆಗೊ ಖರ್ಚು ಮಾಡುತ್ತಿದ್ದೆ. (ಬೆಟ್ಟದ ಹೂ ಸಿನೆಮಾ ನೆನಪಾಯಿತಾ? 39ನೇ ವರ್ಷದಲ್ಲಿ ನೋಡಿದೆ. ಯಾರೊ ನನ್ನ ಕತೆನೆ ಸಿನೆಮಾ ಮಾಡಿದಾರೆ ಅನಿಸ್ತು).

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅನನ್ಯ ದೀಪಾವಳಿ

ನವರಾತ್ರಿಯ ಎರಡು ಸ್ವಾರಸ್ಯಕರ ಘಟನೆಗಳು

ಕತ್ತಲೆಯ ಮತ್ತೊಂದು ಮುಖ