ಮರೆತುಹೋದ ಹಬ್ಬಗಳು
ಮರೆತುಹೋದ ಹಬ್ಬಗಳು
ಹಾಗೆ ನೋಡಿದರೆ ಹಬ್ಬಗಳಲ್ಲಿ ರಾತ್ರಿಯ ಆಚರಣೆಗಳ ಸಂಭ್ರಮ "ನಾಗರ ಪಂಚಮಿ" ಯಿಂದಲೂ ಶುರುವಾಗುತ್ತಿತ್ತು. ನಾಗರಪಂಚಮಿಯಂದು ನಾಗರಬನದಲ್ಲೊ, ಮಲ್ಲಿಕಾರ್ಜುನ ದೇವರ ಸನ್ನಿಧಿಯಲ್ಲೊ, ಮನೆಯಲ್ಲೊ ಹೆಸರುಬೇಳೆ ಅಕ್ಕಿ ಸೇರಿಸಿ ನೀರಿನಲ್ಲಿ ಬೇಯಿಸಿ ಮಾಡಿದ ಚರುವು ಮತ್ತು ಆ ಸೀಸನ್ನಿನಲ್ಲಿ ಯಥೇಚ್ಛ ಸಿಗುತ್ತಿದ್ದ ಹಲಸಿನಬೇಳೆಯ ಹೋಳಿಗೆ, ಒಬ್ಬಟ್ಟು ಏನಾದರೂ ಒಂದು ನೈವೇದ್ಯ ಮಾಡಲಾಗುತ್ತಿತ್ತು. ಮನೆಯವರೊಂದಿಗೆ ಊಟ ಮಾಡಿದರೆ ಹಗಲು ಹಬ್ಬ ಮುಗಿದಂತೆ. ಸಂಜೆ ಮಾತ್ರ ಮದರಂಗಿ ಗಿಡಗಳಿಗೆ ಉಳಿಗಾಲವಿದ್ದಿಲ್ಲ.ಕೆಂಡ ಮದರಂಗಿ ಜಾತಿಯ ಸಸಿ ತಂದು ನೆಟ್ಟು ದೊಡ್ಡ ಮಾಡುವುದೇ ಹೆಮ್ಮೆಯ ವಿಷಯವಾಗಿತ್ತು. ಪೊದೆಯಂತಾದವರ ಮನೆಯಲ್ಲಿ "ಎಮ್ಮನೆಯಲ್ಲಿ ಮದರಂಗಿ ಬೇಕಾದಷ್ಟು ಇದ್ದು" ಎಂದು ಹೇಳುವ ಗತ್ತು ನೋಡಿದರೆ ಅಂದಾಜಾಗಬಹುದು. ಅವತ್ತಿನ ದಿನ ಮದರಂಗಿಯ ಬೆಲೆ! ಅಂತೂ ಇಂತೂ ಮದರಂಗಿ ಎಲೆಯನ್ನು ಮನೆಯ ಗಂಡಸರು, ಮಕ್ಕಳು ಊರೆಲ್ಲ ಅಲೆದು ತರುತ್ತಿದ್ದರು. ಹೆಂಗಸರು ಊಟವಾದ ಮೇಲೆ/ಮೊದಲು ಮದರಂಗಿ ಎಲೆಗೆ ಹುಳಿಕಂಚಿಕಾಯಿ/ನಿಂಬೆಹಣ್ಣು/ಚಹದ ಡಿಕಾಕ್ಷನ್ ಯಾವುದಾದರೂ ಒಂದು ಹಾಕಿ ಒರಳಿನಲ್ಲಿ ಅರೆದುಕೊಡುತ್ತಿದ್ದರು. ಊಟವಾದ ಮೇಲೆ ಮನೆಯಲ್ಲಿ ಈ ಕೆಲಸದಲ್ಲೇ ಪಳಗಿದ ಕೈಯಿಂದ ಮದರಂಗಿ ಲೇಪ ಸೇವೆ . ಎಲ್ಲಾ ಇಪ್ಪತ್ತು ಬೆರಳುಗಳಿಗೆ ಮದರಂಗಿ ಕಲಕ ತೊಡೆದು ಹಾಳವಾರ ಅಥವಾ ಬೇಸಾಳ (ಆಡುಸೋಗೆ) ಸೊಪ್ಪನ್ನು ಸುತ್ತಿ ಬಾಳೆನಾರಿನಿಂದ ಕಟ್ಟಲಾಗುತ್ತಿತ್ತು. ಮಕ್ಕಳಿಂದ ಮುದುಕರವರೆಗೆ ಹಚ್ಚಿಸಿಕೊಳ್ಳುತ್ತಿದ್ದರು. ನನಗದು ಅವರವರ ಜೀವನಪ್ರೀತಿಯ ಮಟ್ಟದ ಅಳತೆಗೋಲಾಗಿತ್ತು. ಅಜ್ಜಿಯಮನೆಯಲ್ಲಿ ಈ ವಿಷಯದಲ್ಲಿ ಇವತ್ತಿಗೂ ಆಯಿ (ಅಮ್ಮನ ಅಮ್ಮ) ಮತ್ತು ಮೂರನೇ ಮಾವನನ್ನು ಮೀರಿಸುವವರಿಲ್ಲ. ಮಾವ ಊರೆಲ್ಲ ಸುತ್ತಿ ಸೊಪ್ಪು ಒಟ್ಟು ಮಾಡಿದರೆ, ಆಯಿ ಅದನ್ನು ಸರಿಯಾಗಿ ಅರೆದು, ಮನೆಯ 20 * ಕನಿಷ್ಠ 4 ಜನರ ಬೆರಳುಗಳಿಗೆ ಮದರಂಗಿ ಲೇಪ ಮಾಡುತ್ತಿದ್ದಳು! ಅವಳ ಸಹನೆ, ಜೀವನಪ್ರೀತಿ ನನ್ನೊಳಗೆ ಬಂದಿರಬೇಕು ಎಂಬ ಗುಮಾನಿ ನನ್ನ ಅಪ್ಪ, ಅಮ್ಮನದು. ಇರಬೇಕು ಎಂದು ನನಗೂ ಎಷ್ಟೋ ಬಾರಿ ಅನಿಸಿದೆ.
ಹೀಗೆ ಕಟ್ಟಿದ ಸೊಪ್ಪಿನ ಟೋಪಿಯೊಳಗೆ ಕೈಗಳು ಕೆರೆಯತೊಡಗುತ್ತಿದ್ದವು. ಅವುಗಳನ್ನು ಬಿಚ್ಚಿ ಎಸೆದರೆ ಸಾಕು ಎನ್ನುವಂತಾಗುತ್ತಿತ್ತು ಮಧ್ಯರಾತ್ರಿಯ ಹೊತ್ತಿಗೆ. ಆದರೆ ಬೆಳಗ್ಗೆ ಬಣ್ಣ ಬರದಿದ್ದರೆ ನಾಚಿಕೆಗೇಡು! ಹಾಗಂದುಕೊಂಡು ಹಾಗೂ ಹೀಗೂ ಬೆಳಗಿನ ಜಾವದಲ್ಲಿ ಸೊಪ್ಪಿನ ಟೋಪಿಗಳನ್ನು ಕಳಚಿ ಎಸೆದುಹಾಕಿ ಮಲಗಿದರೆ ಆಹಾ! ಜೀವಮಾನದಲ್ಲೇ ಬರದಷ್ಟು ಗಾಢನಿದ್ದೆ!!
ಬೆಳಗಾಗೆದ್ದು ನನ್ನ ಕೈನೋಡು, ನಿನ್ನ ಕೈ ತೋರಿಸು! ಎಲ್ಲಾರದ್ದೂ ಕೈನೋಡಿಕೊಳ್ಳುವ ಕಾರ್ಯಕ್ರಮ ಮಜವೋ ಮಜ.
ಅದರ ನಂತರ ರಾತ್ರಿ ಜಾಗರಣೆ ಇದ್ದ ಹಬ್ಬ "ಅನಂತನ ಚತುರ್ದಶಿ". ಈ ಹಬ್ಬ ಎಲ್ಲರ ಮನೆಯಲ್ಲೂ ಇರುತ್ತಿರಲಿಲ್ಲ. ದಾರ ಬಳುವಳಿ ಬಂದವರಿಗೆ ಮಾತ್ರ ವ್ರತೋಪದೇಶ ಎಂದು ಪರಿಗಣಿಸಲಾಗುತ್ತಿತ್ತು. ಹಾಗೂ ಅವರು ಮಾತ್ರ ವ್ರತಾಚರಣೆ ಮಾಡುತ್ತಿದ್ದರು. ಊರಿನಲ್ಲಿ ಹಾಗೆ ಇನ್ನೊಂದು ಹೆಗಡೆ ಮನೆಯವರು ಈ ವ್ರತವನ್ನು ಮಾಡುತ್ತಿದ್ದರು. ಹಗಲು ವ್ರತವಾದರೆ ರಾತ್ರಿ ಇಸ್ಪೀಟು ಮಂಡಲ ಮತ್ತು ಸಿನೆಮಾ ಪ್ರದರ್ಶನ. ಇಸ್ಪೀಟು ಆಡುವವರು ಆಡುತ್ತಿದ್ದರು. ಉಳಿದವರು ಹೆಂಗಸರು, ಮಕ್ಕಳ ಜೊತೆಗೆ ವಿಸಿಆರ್ ನಲ್ಲಿ ಸಿನೆಮಾ ನೋಡುತ್ತಿದ್ದರು. ಬೆಳಗಾದ ಮೇಲೆ ಅವರವರ ಮನೆಗೆ ಹೋಗಿ ಸ್ನಾನ, ನೈಮಿತ್ತಿಕ ಕರ್ಮಗಳನ್ನು ಮುಗಿಸಿ ಪುನಃ ಬಂದು ಪ್ರಸಾದ ಸ್ವೀಕರಿಸಿ ತಾವೂ ಕೃತಾರ್ಥರಾಗುತ್ತಿದ್ದರು.
ಹಾಗೆ ಒಂದು ವರ್ಷ ನಾವೆಲ್ಲ ಸಿನೆಮಾ ನೋಡುತ್ತಿದ್ದೆವು. ಮೂರುವರೆ ವಜ್ರಗಳು ಸಿನೆಮಾ ಮುಗಿಯುವ ಹಂತದಲ್ಲಿತ್ತು. ಬೆಳಗಿನ ಜಾವ ನಾಲ್ಕು ಗಂಟೆ ಸುಮಾರು. ನಾನು ತೂಕಡಿಸಿ ಬೀಳುತ್ತ ಸಿನೆಮಾ ನೋಡುತ್ತಿದ್ದೆ. ಏನೂ ಅರ್ಥವಾಗುತ್ತಿರಲಿಲ್ಲ. ಒಮ್ಮೆಲೆ ಕೂತ ದಿಂಬು ಅಲ್ಲಾಡತೊಡಗಿತು! ಅರೆ! ಇದೆಂತ? ನನಗೆ ಜೋಕಾಲಿ ಪಂಚಪ್ರಾಣ. ಮನೆಯಲ್ಲಿ ದೊಡ್ಡವರು ಕಟ್ಟಿಕೊಡದಿದ್ದರೇನಂತೆ ಎಂದು ನಾನೇ ಹಗ್ಗ ಹುಡುಕಿ ಯಾವ ತೊಲೆ ಗಟ್ಟಿ ಇದೆ ಕೇಳಿ ಅದಕ್ಕೆ ಜೋಕಾಲಿ ಕಟ್ಟಿಕೊಂಡು ಹಗಲೆಲ್ಲ ಆಡುವುದರ ಪರಿಣಾಮ! ನಿದ್ದೆಯಲ್ಲೂ ಜೋಕಾಲಿ ಕನಸು ! ಹಾಗೆಂದುಕೊಂಡು ನನಗೆ ನಾನೇ ಎಚ್ಚರ ಮಾಡಿಕೊಂಡು ಸಿನೆಮಾ ನೋಡುವ ಪ್ರಯತ್ನದಲ್ಲಿದ್ದೆ. ಅಷ್ಟರಲ್ಲಿ ಮೆತ್ತಿ(ಮಹಡಿ)ಯಲ್ಲಿದ್ದ ಇಸ್ಪೀಟು ಮಂಡಲಿಯವರೆಲ್ಲ ಓಡಿ ಬಂದರು. ನೋಡಿದರೆ ನಿಜವಾಗಿಯೂ ಭೂಮಿ ಒಮ್ಮೆ ಜೋರಾಗಿ ಅಲ್ಲಾಡಿತ್ತು ! ವಾಸ್ತವವಾಗಿ ಭೂಕಂಪ ಹೇಗಿರುತ್ತದೆ ಎಂದು ಅವತ್ತು ಗೊತ್ತಾಯಿತು.
ಮುಂದುವರೆಯುವುದು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ