ರಾತ್ರಿಗಳ ಹಬ್ಬಗಳು

ರಾತ್ರಿಗಳ ಹಬ್ಬಗಳು
ಸಂಜೆಗಳು ಸುಂದರವಾಗಿಯೂ ಇರುತ್ತವೆ. ಈ ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದ ದೊಡ್ಡ ಭಾಗ್ಯವೆಂದರೆ ಸಾಲು ಸಾಲು ಹಬ್ಬಗಳ ಆಚರಣೆ. ಅದರಲ್ಲೂ ನಾನು ಅಜ್ಜನ ಮನೆಯಲ್ಲಿ ಬೆಳೆದ ಈ ವಾತಾವರಣ ಬದುಕಿಗೊಂದು ಧಾರ್ಮಿಕ ಮತ್ತು ಸಾಂಸ್ಕೃತಿಕ ಆಯಾಮ ನೀಡಿತು. ಈ ಆಚರಣೆಗಳು ಹಗಲು ಮತ್ತು ರಾತ್ರಿ (ಅಹೋರಾತ್ರಿ ಅಲ್ಲ) ಎರಡು ಕಾಲಗಳಲ್ಲಿಯೂ ನಡೆಯುತ್ತವೆ. ಮಧ್ಯರಾತ್ರಿ ಮಾಡುವ ಶ್ರೀ ಕೃಷ್ಣ ಜನ್ಮಾಷ್ಟಮಿ ನನಗೆ ಕೃಷ್ಣನನ್ನು ಪರಿಚಯಿಸಿತು. ಅದಕ್ಕೂ ಮೊದಲು ಶಾಲೆಯಲ್ಲಿ ನಡೆಯುತ್ತಿದ್ದ ನೃತ್ಯಗಳಲ್ಲಿ ಕೃಷ್ಣನಾಗಿ ನಿಂತುಕೊಂಡಿದ್ದಷ್ಟೆ. ಅವನ ಬಗ್ಗೆ ಯಾವ ಕುತೂಹಲ ಹುಟ್ಟುವ ವಯಸ್ಸೂ ಅದಾಗಿರಲಿಲ್ಲ. ಈಗ ಅಜ್ಜನಮನೆಯಲ್ಲಿ "ಪೂಜೆ" ಗೊಳ್ಳುವ ಕೃಷ್ಣ ಕುತೂಹಲ ಹುಟ್ಟಿಸಿದ. ಆದರೆ ನಿಜಕ್ಕೂ ಕೃಷ್ಣ ಹತ್ತಿರವಾಗಿದ್ದು ಹೈಸ್ಕೂಲಿಗೆ ಬಂದ ನಂತರ ಭಗವದ್ಗೀತೆಯ ಮೂಲಕ. ಇಂತಿಪ್ಪ ಕೃಷ್ಣನ ಜನ್ಮದಿನ "ಕೃಷ್ಣಾಷ್ಟಮಿ ಹಬ್ಬ " ಜೋರಾಗಿಯೇ ಇರುತ್ತಿತ್ತು. ಮಧ್ಯರಾತ್ರಿಯಲ್ಲಿ ಸಾಲಿಗ್ರಾಮಗಳ ಅಭಿಷೇಕ, ವಿಶೇಷವಾಗಿ ಹಲಸಿನ ಸೊಳೆ(ತೊಳೆ)ಯಿಂದ ಮಾಡಿದ ಉಪ್ಪು ಹಾಕದ ಉಂಡಲೆಕಾಳು, ಬೆಲ್ಲಹಾಕಿದ ಸಿಹಿ ಉಂಡಲೆಕಾಳು ಹೀಗೆ ವಿವಿಧ ಬಗೆಯ ವಿಶೇಷ ಕಜ್ಜಾಯಗಳು ನೈವೇದ್ಯಕ್ಕಿರಬೇಕಾಗಿತ್ತು. ಸಾಮಾನ್ಯವಾಗಿ ಅವರವರ ಮನೆಯಲ್ಲಿ ಹಿರಿಯರು ಹೇಳಿಕೊಟ್ಟ ವಿಧಾನವನ್ನು ಕಿರಿಯರು ಶ್ರದ್ಧೆಯಿಂದ ಅನುಸರಿಸುತ್ತಿದ್ದರು.

ನಾನು ರಾತ್ರಿ ನಿದ್ದೆ ಎಳೆಯುತ್ತಿದ್ದರೂ ಮೊದಲೆರಡು ವರ್ಷ ತೂಕಡಿಸುತ್ತ ಪೂಜೆ ನೋಡುತ್ತಿದ್ದೆ. ಪೂಜೆಯಾದ ಮೇಲೆ ಊಟ. ಎಷ್ಟೇ ಹಸಿವಾದರೂ ಮಕ್ಕಳಾದರೂ ಕಾಯಲೇಬೇಕಿತ್ತು. ಈಗ ಯಾರು ಬರಲಿ, ಬಿಡಲಿ ಅವರವರ ಅನ್ನ ಅವರವರು ಬಡಿಸಿಕೊಂಡು ಟಿವಿಯೊ, ಮೊಬೈಲೊ ನೋಡುತ್ತ ತಿನ್ನುವಾಗ ಅನಿಸುತ್ತದೆ; ಆ ದಿನಗಳ ಶಿಸ್ತು, ಹಸಿವು, ಸಾಮೂಹಿಕ ಭೋಜನ ತರುತ್ತಿದ್ದ ಅದಮ್ಯ ತೃಪ್ತಿ ಇವತ್ತು ಯಾಂತ್ರಿಕ ಬದುಕಿನಲ್ಲಿಲ್ಲ. ನಾವು ಸ್ಪಂದನೆಯಿಲ್ಲದ ಪಶುಗಳಾಗುತ್ತಿದ್ದೇವೊ ? ಹಗಲಿಡೀ ದುಡಿದು ಕಟ್ಟೆ ಹಾಕುವುದೇ ಊಟ, ಬಟ್ಟೆಗೆ. ರುಚಿಯಾಗಿ ಮಾಡುವವರಿಲ್ಲ, ಮಾಡಿದರೆ ತಿನ್ನುವವರಿಲ್ಲ. ಎಂತಹ ಶಾಪ ಈ ನಾಗರೀಕತೆದು! ಅದು ಹೀಗೆ, ಹಾಗೆ ಎಂದು ಗೊಣಗದೆ ದೇವರ ಪ್ರಸಾದವೆಂದು ಹೆಚ್ಚು ಮಾತನಾಡದೆ, ಬೇಕಷ್ಟೆ ಬಡಿಸಿಕೊಂಡು, ಸ್ವಲ್ಪ ಸಹ ಹಾಳು ಮಾಡದೆ ಉಣ್ಣಬೇಕಿತ್ತು. ಇಂತಹ ಶಿಸ್ತನ್ನು ಈಗ ಮಕ್ಕಳಲ್ಲಿ ಹೇಗೆ ಮೂಡಿಸುವುದು? ಗೊತ್ತಿಲ್ಲ.
ಇರಲಿ, ವಿಷಯಕ್ಕೆ ಬರೋಣ. ಕೃಷ್ಣಾಷ್ಟಮಿಯ ನೆನಪುಗಳು, ಸೊಳೆ ಉಂಡಲೆಕಾಳು ಖರ್ಚಾಗುವಷ್ಟರಲ್ಲಿ ಚೌತಿಹಬ್ಬ ಬರುತ್ತಿತ್ತು.
ಈ ಹಬ್ಬವೋ ಒಂದು ಅದ್ಭುತ ಅನುಭವ. ಗೌರಿತದಿಗೆಯ ಮೊದಲ ದಿನ ರಾತ್ರಿ ಗಣೇಶನ ಮಣ್ಣಿನ ಮೂರ್ತಿ ಪೇಟೆಯಿಂದ ಬರುತ್ತಿತ್ತು.ಜೊತೆಗೆ ಹಾವು, ಇಲಿ ಸಹ ಬರುತ್ತಿದ್ದವು.ನಮಗೋ ಮಕ್ಕಳಿಗೆ ಅವುಗಳ ಮೇಲೇ ಕಣ್ಣು.

ಅವತ್ತು ರಾತ್ರಿಯೆಲ್ಲ ಬಗೆಬಗೆ ರೀತಿ ಮಂಟಪಗಳು ರಚನೆಯಾಗುತ್ತಿದ್ದವು. ಉತ್ತಮ ಕಲಾಭಿರುಚಿ ಮತ್ತು ಒಳ್ಳೆಯ ಎಂಜಿನಿಯರ್ ತಲೆ ಇದ್ದ ದೊಡ್ಡ ಮಾವ ಬಹಳ ಚೆಂದದ ಮಂಟಪ ಕಟ್ಟುತ್ತಿದ್ದ. ಖಾಲಿಯಾದ ಇಂಜೆಕ್ಷನ್ ಬಾಟಲಿಗಳಿಂದ, ಮನೆಯ ಪಕ್ಕದಲ್ಲೇ ಇರುತ್ತಿದ್ದ ಹುಲ್ಲು, ಅಡಿಕೆ ಹಾಳೆ ಇಂತಹವುಗಳಿಂದ ತರಹ ತರಹದ ಮಂಟಪಗಳು ತಯಾರಾಗುತ್ತಿದ್ದವು.
ಇವುಗಳ ತಯಾರಿಕೆಯನ್ನು ರಾತ್ರಿ ನಿದ್ದೆ ಇನ್ನು ತಡೆಯಲಾರೆವು ಎನ್ನುವ ವರೆಗೆ ನೋಡಿಕೊಂಡು ಮಲಗುತ್ತಿದ್ದೆವು. ಬೆಳಗಾಗುವಷ್ಟರಲ್ಲಿ ಸುಂದರ ಮಂಟಪ ಕಣ್ಣಿಗೆ ಕುಕ್ಕುತ್ತಿತ್ತು. ಚಿಕ್ಕಮಕ್ಕಳನ್ನೆಲ್ಲ ಬೇಗ ಎಬ್ಬಿಸಿ ಸ್ನಾನ ಮಾಡಿಸಿ ಬಿಡುತ್ತಿದ್ದರು. ನಂತರ ದೊಡ್ಡವರು ಸ್ನಾನ ಮಾಡಿ ಪೂಜೆ ಮಾಡುತ್ತಿದ್ದರು. ಗೌರಿತದಿಗೆಯ ದಿನ ಫಲವಳಿಗೆ ಕಟ್ಟುವುದು ವಿಶೇಷವಾಗಿತ್ತು. ಗೌರಿಹೂ ಮುಖ್ಯ ಪಾತ್ರಧಾರಿ. ಉಳಿದ ಫಲವಸ್ತುಗಳು ಸಹನಟರು. ಅವರೆಲ್ಲ ಮಂಟಪದ ಮೇಲಿನ ಸಿರುಬಳೆಯ ಕಂಬಗಳಲ್ಲಿ ನೇತುಬಿದ್ದರೆ ""ಗೌರಿ"" ಬಂದ ಹಾಗೆ. ಪ್ರಕೃತಿಯೇ ಗೌರಿ ಯೆಂಬ ನೋಟ ಎಷ್ಟು ಚೆಂದ!

ಅವತ್ತು ಗಣೇಶನ ಹಬ್ಬದ ಮತ್ತಷ್ಟು ತಯಾರಿ. ಪಟಾಕಿಗಳು ಬರುತ್ತಿದ್ದವು. ಅವುಗಳನ್ನೆಲ್ಲ ಒಲೆಯ ಹತ್ತಿರ ಇಟ್ಟು ಮಾರನೆ ದಿನ ಹೊಡೆಯಲು ಅಣಿಮಾಡಲಾಗುತ್ತಿತ್ತು. ಒಮ್ಮೊಮ್ಮೆ ಎಂತ ತಮಾಷೆಯೆಂದರೆ ಅವು ಬಿಸಿಗಿಟ್ಟಲ್ಲೇ ಹೊಟ್ಟಿಹೋಗುತ್ತಿದ್ದವು. ಕೆಲವೊಮ್ಮೆ ನೀರು ಬಿದ್ದು ಇನ್ನಷ್ಟು ಟುಸ್ ಎನ್ನುತ್ತಿದ್ದವು. ಸ್ಪರ್ಧೆಯಲ್ಲಿ ನಮ್ಮ ಪ್ರದರ್ಶನದಂತೆ. ಆದರೂ ಬಹಳ ಸಂತೋಷ, ಸಂಭ್ರಮ. ಮಾರನೆಯ ದಿನ ಗಣೇಶ ಚತುರ್ಥಿ. ಮುಂಚಿನದಿನವೇ ಬೆಳಗ್ಗೆ ತಲೆಸ್ನಾನ ಮಾಡಿ, ಮಡಿ ಉಟ್ಟು ಕೆಜಿಗಟ್ಟಲೆ ಕಡಲೆಕಾಳನ್ನು ತೊಳೆದು, ಹುರಿದಿಡುತ್ತಿದ್ದರು ಹೆಂಗಸರು. ಗಂಡಸರು ಮಡಿ ಉಟ್ಟು ಹತ್ತಿರದ ಮಿಲ್ಲುಗಳಿಗೆ ಹೋಗಿ ಹಿಟ್ಟು ಮಾಡಿಸಿಕೊಂಡು ಬರುತ್ತಿದ್ದರು. ಅಲ್ಲಿ ಬ್ರಾಹ್ಮಣ ಜಾತಿಯಿರಲಿ, ಬೇರೆಯ ಜಾತಿಯವರಿರಲಿ ಸ್ನಾನ ಮಾಡಿ ತೊಳೆದ ಬಟ್ಟೆಯ ಮಡಿ ಇರುತ್ತಿತ್ತು. ಹಬ್ಬದ ಆಚರಣೆಗಳ ಬಗ್ಗೆ ಇಡೀ ಜನಸಮುದಾಯದಲ್ಲಿ ಅಷ್ಟು ಆದರವಿರುತ್ತಿತ್ತು.

ಹಬ್ಬದ ದಿನ ದೊಡ್ಡ ಕೊಪ್ಪರಿಗೆಯಂತಹ ಪಾತ್ರೆಯಲ್ಲಿ ಬೆಲ್ಲದ ಪಾಕ ಬರಿಸಿ, ಮುಂಚಿನ ದಿನ ಮಾಡಿಸಿ ತಂದ ಕಡಲೆಹಿಟ್ಟು, ಏಲಕ್ಕಿ, ತೆಂಗಿನ ತುರಿ ಸೇರಿಸಿ ಪಂಚಕಜ್ಜಾಯ ಸಿದ್ಧವಾಗುತ್ತಿತ್ತು. ಅದನ್ನು ಹಬ್ಬ ಮುಗಿದು ಮುಂದಿನ ನವರಾತ್ರಿಯ ತನಕ ತುಪ್ಪ ಅಥವಾ ಹಾಲು ಹಾಕಿಕೊಂಡು ಮನೆಯ ಅಬಾಲವೃದ್ಧರಾದಿಯಾಗಿ ಮೆಲ್ಲುತ್ತಿದ್ದರು. ಬೆಲ್ಲದಪಾಕದ ಹದ ತಪ್ಪಿದಾಗ ನಾರಕಲು ಉಂಡೆಯಾಗಿ ನಂತರದ ದಿನಗಳಲ್ಲಿ ಅಕ್ಕಚ್ಚು ಸೇರುತ್ತಿದ್ದುದೂ ಇತ್ತು. ಸಕ್ಕರೆ ಬಳಕೆ ಜಾಸ್ತಿಯಾದ ಮೇಲೆ ಸಕ್ಕರೆ ಪಾಕದಲ್ಲಿ ಸುಲಭವಾಗಿ ಸಿದ್ಧಗೊಳ್ಳತೊಡಗಿತು. ಈಗ ಮಕ್ಕಳು ಮಾತ್ರ ಶಾಲೆ ಬಿಟ್ಟ ಮೇಲೆ ತಿಂಡಿಯಾಗಿ ತಿನ್ನತೊಡಗಿದರು. ಬೇರೆ ಕರ್ಜಿಕಾಯಿ, ಮೋದಕ, ಕಲಸನ್ನ, ಚಿತ್ರಾನ್ನ, ಬುತ್ತಿಅನ್ನ, ಪುರಿ, ಪಾಯಸ, ಹಪ್ಪಳ/ಅಂಬೊಡೆ ಇವೆಲ್ಲ ಅವರವರ ಮನೆಯ ಪದ್ಧತಿ ಪ್ರಕಾರ ಚಾಚೂ ತಪ್ಪದ ನೈವೇದ್ಯಗಳಾಗಿದ್ದವು. ಹಬ್ಬದ ದಿನ ಹೊತ್ತುಮುಳುಗುವವರೆಗೆ ಯುವಕರು ಜೂಜುಗಾಯಿ ಆಟ ಆಡುವ ಸಂಪ್ರದಾಯವಿತ್ತು. ಅತ್ಯಂತ ಚಿಕ್ಕ ಕಾಯಿಯನ್ನು ನಿರ್ದಿಷ್ಟ ದೂರದಲ್ಲಿಟ್ಟು ಕಲ್ಲಿನಿಂದ ಗುರಿ ಇಟ್ಟು ಹೊಡೆದು ಪುಡಿ ಮಾಡಬೇಕಿತ್ತು. ಈ ಆಟ ಸಂಜೆಯವರೆಗೆ ನಡೆದ ನಂತರ ಗಣೇಶನಿಗೆ ವಿಶೇಷ ಕಷಾಯ ನೈವೇದ್ಯ ಮಾಡುತ್ತಿದ್ದರು. ಭಜನೆಗಳು ನಡೆಯುತ್ತಿದ್ದವು.
ಮಾರನೇ ದಿನವೇ ಋಷಿಪಂಚಮಿ. ಅಸಲಿ ಮಜ ಅವತ್ತಿನ ಸಂಜೆಯದು.

ನಾಳೆಗೆ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನವರಾತ್ರಿಯ ಎರಡು ಸ್ವಾರಸ್ಯಕರ ಘಟನೆಗಳು

ಅನನ್ಯ ದೀಪಾವಳಿ

ಕತ್ತಲೆಯ ಮತ್ತೊಂದು ಮುಖ