ಆ ಒಂದು ಹೊಡೆತ ಬದುಕಿಗೆ ಸಾಕು
ಆ ಒಂದು ಹೊಡೆತ ಬದುಕಿಗೆ ಸಾಕು
ನನಗೆ ಕತ್ತಲು ಹೊಸತಾಗಿರಲಿಲ್ಲ. ಒಂದು ಅಥವಾ ಎರಡನೇ ತರಗತಿ ಇರಬೇಕು. ನನಗೊಂದು ವಿಚಿತ್ರ ಮೋಹ ಬಂದಿತ್ತು. ಪೇಟೆಯಂತಹ ಹಳ್ಳಿಯಲ್ಲಿ ನನ್ನ ಅಪ್ಪನ ಅಂಗಡಿ ಇತ್ತು. ನಾವು ಅಂಗಡಿಗೆ ತಾಗಿಯೇ ಇದ್ದ ನಮ್ಮ ಮನೆಯಲ್ಲಿದ್ದೆವು. ಅಂಗಡಿಯೆದುರು ಎರಡು ತಾಲೂಕುಗಳನ್ನು ಸೇರಿಸುವ ರಸ್ತೆ. ವಾಹನಗಳ ಓಡಾಟ ಬಹಳ.
ನಾನು ಸಂಜೆಯಾಗಲಿಕ್ಕಿಲ್ಲ, ರಸ್ತೆಯ ಅಂಚಿಗೆ ಹೋಗಿ ನಿಂತು ಬಿಡುತ್ತಿದ್ದೆ. ಒಂದೇ ಸಮನೆ ಬರುತ್ತಿದ್ದ ವಾಹನಗಳನ್ನು ನೋಡುವುದೇ ಚೆಂದ. ಕತ್ತಲೆಯ ಆ ದಾರಿಯಲ್ಲಿ ವಾಹನಗಳ ಬೆಳಕು ಅಪ್ಯಾಯಮಾನವಾಗಿರುತ್ತದೆ. ಈ ಕತ್ತಲು, ಬೆಳಕಿನಾಟ ನನಗೆ ಸೊಗಸಾಗಿ ತೋರಿದ್ದರಲ್ಲಿ ಆಶ್ಚರ್ಯವಿಲ್ಲ. ನಿಜವಾದ ಸಮಸ್ಯೆ ಅಮ್ಮನಿಗೆ ಕಾಣಿಸುತ್ತಿತ್ತು. ಎಲ್ಲಾ ಅಮ್ಮಂದಿರ ಹಾಗೆ ನನ್ನಮ್ಮನಿಗೂ ಒಬ್ಬಳೇ (ಅಲ್ಲಿವರೆಗೆ) ಮಗಳು. ಹೆತ್ತವರಿಗೆ ಹೆಗ್ಗಣ ಮುದ್ದಾದ ಹಾಗೆ ಅಮ್ಮನಿಗೂ ನಾನು ಸುಂದರಿ. ರಸ್ತೆಯ ಪಕ್ಕ ಕುಳಿತ ನನ್ನನ್ನು ಯಾರಾದರೂ ಎತ್ತಿಕೊಂಡು ಗಾಡಿಯಲ್ಲಿ ತುಂಬಿಕೊಂಡು ಹೋಗಿ ಬಿಟ್ಟರೆ! ಭಯ, ಆತಂಕಗಳಿಂದ ಕಂಗಾಲಾದ ಅಮ್ಮ ದಿನ "ಬೇಡ, ಮಗಳೆ ಹೋಗಬೇಡ, ಹಾಗೆ ರಸ್ತೆ ಬದಿಯಲ್ಲಿ ನಿಲ್ಲಬೇಡ. ಯಾರಾದರೂ ಎತ್ಕೊಂಡು ಹೋಗ್ಬಹ್ದು" ಎಂದು ಹೇಳುತ್ತಲೇ ಇದ್ದಳು.
ಹದಿನೈದು ದಿನ ಆಗಿರಬಹುದು. ಅವತ್ತೂ ಹಾಗೆಯೇ ರಸ್ತೆ ಬದಿಯಲ್ಲಿ ಕುಕ್ಕರುಗಾಲಿನಲ್ಲಿ ಕುಳಿತು ಗಾಡಿಗಳನ್ನು ನೋಡ್ತಾ ಇದ್ದೆ. ಯಾಕೊ ಅಮ್ಮ ಬಂದ ಹಾಗಾಯ್ತು. ಭಯವಾಯ್ತು. ಅಂಗಡಿಯ ಎದುರು ಬಲಗಡೆಗೆ ಒಂದು ದೊಡ್ಡ ಬಾವಿ ಇತ್ತು. ಅದರ ಹಿಂದೆ ಹೋಗಿ ನಿಂತೆ. ಅಲ್ಲಾಗಲೇ ಅಬ್ಬಜ್ಜಿ ಎಂಬ ದಲಿತ ಅಜ್ಜಿಯ ಮೊಮ್ಮಗ ನಿಂತಿದ್ದ. ನನ್ನ ಕಂಡಕೂಡ್ಲೆ ಏಯ್ ನನ್ಹೆಂಡ್ತಿ ಎಂದು ರೇಗಿಸಿದ. ವಯಸ್ಸಿನಲ್ಲಿ ಹತ್ತು ವರ್ಷ ದೊಡ್ಡವನಾಗಿದ್ದ ಅವನು ಎಂತಲ್ಲ. ಯಾವ ಹುಡುಗರು, ಗಂಡಸರೂ ನನಗೆ ನನ್ನ ಮದ್ವೆಯಾಗೆ ಎಂದು ರೇಗಿಸುತ್ತಿದ್ದರು. ನಾನು ಉರಿದುಬೀಳುತ್ತಿದ್ದೆ. ಅವರೆಲ್ಲ ಮಜ ತೆಗೆದುಕೊಳ್ಳುತ್ತಿದ್ದರು. ನನಗೆ ಸಿಟ್ಟು ಬರಿಸುವುದೊಂದು ಚಟವಾಗಿಬಿಟ್ಟಿತ್ತು ಎಲ್ಲರಿಗೂ. ಅದೇ ರೀತಿ ಅವನೂ ಚುಡಾಯಿಸಿದ.ನಾನು ಅವನಿಂದ ತಪ್ಪಿಸಿಕೊಂಡು ಬಾವಿಯ ಆ ಕಡೆಯಿಂದ ಬಂದ್ನ? ಅಮ್ಮ ಕೈಹಿಡಿದುಕೊಂಡೇ ಬಿಟ್ಳು. ಸೀದ ಮನೆಯ ಹಿಂಬದಿಯಿಂದ ಬಚ್ಚಲುಮನೆಗೆ ಕರೆದುಕೊಂಡು ಹೋಗಿ ನಿಲ್ಲಿಸಿದಳು. (ಬಚ್ಚಲುಮನೆಯೇ ಏಕೆ ಎಂದು ಕೇಳಬೇಡಿ. ಊರಿನಲ್ಲಿ ನನ್ನ ರೆಪ್ಯುಟೇಶನ್ ಲೇವಲ್ಲಿಗೆ. ಮನೆ ಒಳಗೆ ಹೊಡೆದರೆ ಓಕೆ. ಹೊರಗೆ ಹೊಡೆದರೆ ನಮ್ಮ ಹುಡುಗಿಗ್ಯಾಕೆ ಹೊಡಿತೀರಿ ಎಂದು ಊರಿಗೂರೇ ಅಪ್ಪ-ಅಮ್ಮನನ್ನು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆ ಇತ್ತು. ಊರಿನ ಮಗಳಾಗುವ ಸುಖ ನನ್ನದಾಗಿತ್ತು.)ಸುಬಾಬುಲ್ಲು ಎನ್ನುವ ಬೇಲಿಹೂವಿನ ಗಿಡದ ಮೂರು ಕಡ್ಡಿಗಳನ್ನು ಹಿಡಿದಿದ್ದಳು. ಸರಿಯಾಗಿ ಕಾಲಿಗೆ ನಾಲ್ಕು ಬಿಟ್ಟಳು ನೋಡಿ. ಇನ್ಮೇಲೆ ಕತ್ತಲಾದ್ಮೇಲೆ ಹೊರಗೆಲ್ಲಾದ್ರೂ ಕಂಡ್ರೆ ನೋಡು ಎಂದಳು. ನಾನು ಅಳುತ್ತ ಆಯ್ತಮ್ಮ ಅಂದೆ. ಆಮೇಲೆ ಅಜ್ಜಿಯಮನೆಯಲ್ಲಿ 6ನೇ ತರಗತಿಯವರೆಗೆ ಕತ್ತಲಾದ ಮೇಲೆ ಹೊರಗೆ ಓಡಾಡಿರಲಿಲ್ಲ.
ಮೂರನೇ ತರಗತಿಯ ಬೇಸಿಗೆ ರಜೆಯಲ್ಲಿ ಒಂದು ರಾತ್ರಿ ದೊಡ್ಡ ಲಾರಿ ಮಾಡಿ ಅಪ್ಪ ಇದ್ದಕ್ಕಿದ್ದ ಹಾಗೆಯೇ ನನ್ನನ್ನು, ತಂಗಿ ಮತ್ತು ಅಮ್ಮನನ್ನೂ ಹತ್ತಿಸಿಕೊಂಡು ತೋಟದ ಮನೆಗೆ ಶಿಫ್ಟ್ ಮಾಡಿಬಿಟ್ಟ. ಆ ರಾತ್ರಿ ಆಕಾಶದ ತುಂಬಾ ಬೆಳದಿಂಗಳು. ಲಾರಿ ಅನ್ ಲೋಡ್ ಮಾಡಿ ಹೊರಟುಹೋಯಿತು. ಮನೆಯ ಪೂರ್ವಕ್ಕೆ ರಸ್ತೆ, ರಸ್ತೆಯ ಪಕ್ಕ ಕಾಡು. ಎದುರು ನಾಗರಬನ. ಎಡಗಡೆ ಇಳಿಜಾರು ಬಯಲು, ಗದ್ದೆ.ಹಿಂದೆ ಬಯಲು ಇತ್ತು. ಆ ಅಂಚಿನಲ್ಲಿ ಸಾಲಾಗಿ ಬಿದಿರು ಮಟ್ಟಿ ಇತ್ತು. ದಟ್ಟ ಕಾಡು. ಹುಲಿ, ನರಿ ಕೂಗುವುದು ಮಾಮೂಲಾಗಿತ್ತು. ಮನೆಯೋ ಹೆಂಚೊಂದನ್ನು ಹೊದ್ದುಕೊಂಡು ನಿರ್ಜನ ಬಯಲಿನಲ್ಲಿ ಯಾರಿಗಾಗಿಯೋ ದಾರಿ ಕಾಯಿತ್ತಿದ್ದ ನಿರ್ಗತಿಕ ಒಂಟಿ ಹೆಣ್ಣಿನ ಹಾಗಿತ್ತು.
ನಾವು ಹೋಗಿ ಕಾಲಿಟ್ಟಾಗ ಚಿಮಣಿ ದೀಪವೂ ಇರಲಿಲ್ಲ. ಆ ಬೆಳದಿಂಗಳ ಬೆಳಕಿನಲ್ಲೇ ಮನೆಯೆಂಬ ಹೆಸರಿನ ಆಕೃತಿಯ ಒಳಗೆ ಕಾಲಿಟ್ಟರೆ ಒಣಗಿದ ಗದ್ದೆಯಂತಹ ನೆಲದ ಮೇಲೆ ಗೋಣಿಚೀಲ ಹಾಕಿಕೊಂಡು ಮಲಗಿದೆವು. ರಾತ್ರಿಯ ಭಯ ಅವತ್ತೇ ಅಲ್ಪಸ್ವಲ್ಪ ಇದ್ದರೂ ಮುಗಿದೇಹೋಗಿತ್ತು. ಗಂಟೆಯೂ ಇಲ್ಲದ ಆ ದಿನಗಳಲ್ಲಿ ಇದ್ದ ಒಂದೇ ಒಂದು ಗಡಿಯಾರ ರೇಡಿಯೊ. ಆಕಾಶವಾಣಿ ಧಾರವಾಡ ಕೇಂದ್ರದೊಂದಿಗೆ ಸಾಂಗತ್ಯ ಬೆಳೆದಿದ್ದು ಕಾಲಗಣನೆಯ ನೆಪದಲ್ಲಿ. ಒಮ್ಮೆ ಹೀಗಾಗಿತ್ತು. ಅಪ್ಪ ಯಾವಾಗಲೂ ಇರುತ್ತಿರಲಿಲ್ಲ. ಅಮ್ಮ, ನಾನು, ತಂಗಿ, ಮೂವರು ರೇಡಿಯೊ ಸ್ಟೇಷನ್ ಹಾಕಿದಾಗೆಲ್ಲ ಸಿಗ್ನಲ್ ಹೋಗಿಬಿಟ್ಟಿತ್ತು. ನಾವಂದ್ಕೊಂಡಿದೀವಿ ಮಧ್ಯಾಹ್ನ ಆಗಿಬಿಟ್ಟಿದೆ ಅಂತ. ಅಮ್ಮ ಗಡಬಡಿಸಿ ನಮ್ಮಿಬ್ರಿಗೂ ಊಟ ಹಾಕಿ, ತಾನೂ ಉಂಡು, ಮಧ್ಯಾಹ್ನವೆಂದು ಮಲಗಿದ್ದಾಳೆ.ಎದ್ದು ನೋಡಿದಾಗ ಇನ್ನೂ ಮಧ್ಯಾಹ್ನದ 12.30ಆಗ್ತಾ ಇತ್ತು! ಹಗಲು-ರಾತ್ರಿ ಕರೆಂಟು ಬೆಳಕಿನಲ್ಲಿ, ಜನರ ಮಧ್ಯೆ ಬೆಳೆಯುತ್ತಿದ್ದ ನಾವು ಈಗ ಇದ್ದಕ್ಕಿದ್ದ ಹಾಗೆ ಕಂಡುಕೇಳರಿಯದ ಕಾಡಿನ ಮನೆಗೆ ರಾತ್ರಿ ಬಂದಾಗ ಜೀವನದ ಮತ್ತೊಂದು ಸಂದೇಶ ನನ್ನ ತಲೆಗೆ ಸೇರಿಕೊಂಡಿತು. "ಬದುಕು ಕಾಲಾತೀತ"
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ