ಭ್ರಮೆ ಮತ್ತು ವಾಸ್ತವ
ಭ್ರಮೆ ಮತ್ತು ವಾಸ್ತವ
ಕತ್ತಲು ಮತ್ತು ಬೆಳಕು ಒಂದಕ್ಕೊಂದು ಬೆರೆತು ಬದುಕುವಂತವು. ಎರಡಕ್ಕೂ ಅಸ್ತಿತ್ವ ಇರುವುದು ಇನ್ನೊಂದರ ಅಸ್ತಿತ್ವದ ಮೇಲೆ. ಇದೊಂತರ ಒಳ್ಳೆಯದು, ಕೆಟ್ಟದು ಇದ್ದ ಹಾಗೆ.
ನನಗೆ ಕತ್ತಲು ಕತ್ತಲು ಎಂದೇ ಅನಿಸುವುದಿಲ್ಲ. ಬದಲಿಗೆ ಬೆಳಕು ಬರುವ ಮುನ್ಸೂಚನೆ ಅನಿಸುತ್ತದೆ. ನಿಚ್ಛಳ ಬೆಳಕಿನಲ್ಲಿ ಆತಂಕಗೊಳ್ಳುತ್ತೇನೆ. ಬೇಡವೆಂದರೂ ಬಂದೇ ಬರುವ ಕತ್ತಲ ಬಗ್ಗೆ.
ನಾನು ನನ್ನ ಒಂಭತ್ತೂವರೆ ವರ್ಷದಿಂದ ೧೨ವರೆ ವರ್ಷಗಳ ವರೆಗೆ ಅಜ್ಜಿ ಮನೆಯಲ್ಲಿ ಬೆಳೆದೆ. ಆ ಸಮಯದಲ್ಲಿ ರಾತ್ರಿ ಚಿತ್ರಮಂಜರಿಯೊ ಹಾಳು ಮೂಳು ಆಟವೊ, ಊರಲ್ಲೆಲ್ಲ ಊಟ ಮಾಡಿ ಮಲಗಲು ಹೊರಟರೆಂದೊ ನಾನು ಮನೆಗೆ ಹೊರಡುತ್ತಿದ್ದೆ. ಹೇಳಿ ಕೇಳುವವರು ಯಾರೂ ಇರಲಿಲ್ಲ ಎಂದಲ್ಲ. ಬೈದರೆ ಜಗ್ಗುವವಳಲ್ಲ, ಹೊಡೆದರೆ ಬಗ್ಗುವವಳಲ್ಲ ಎಂದು ಎಲ್ಲಾ ಸುಸ್ತಾಗಿ ಏನಾರ ಮಾಡ್ಕಳ್ಳಿ ಎಂದು ಬಿಟ್ಟ ಗಾಡಿ. ಆಯಿ ಎಂಬ ಅಡಗಿಸುವ ಸೆರಗು ಇರುವವರೆಗೂ ಅವಳ ಹಿಂದೆ , ನಂತರ ದೊಡ್ಡತ್ತೆ ಆಮೇಲೆ ನಾನೆಂಬ ನಾನೇ ಇದ್ದರಲ್ಲ. ಬೈದರೆ ಸಣ್ಣದಾಗಿ ಅವರತ್ರ ಹೇಳಿ ಹೋಗಿದ್ದೆ ಎಂದರೆ ಮುಗಿಯಿತು. ರಾತ್ರಿ 9 ಗಂಟೆಯ ಮೇಲೆ ಕತ್ತಲಲ್ಲಿ ಕೆಳಗಿನ ಕೇರಿಯಿಂದ ಮೇಲಿನ ಕೇರಿಗೆ ಅರ್ಧ ಕಿ.ಮೀ ಹಾದಿ. ಸಣ್ಣ ಏರು ಹತ್ತಿ ಬರಬೇಕಿತ್ತು. ಕತ್ತಲೆಯ ಹಾದಿ. ಒಂದು ಕಡೆ ದೊಡ್ಡ ಕಾನಿಗೆ ಹೊಂದಿಕೊಂಡಿರುವ ಸಣ್ಣ ಕುರುಚಲು ಕಾಡು. ರಸ್ತೆಯ ಬಲಕ್ಕೆ ಸಣ್ಣ ಇಳಿಜಾರು.ಹುಲ್ಲ ಬಯಲು , ಬಯಲಿನ ಕೆಳಗೆ ಅಡಿಕೆ ಮರಗಳ ದಟ್ಟವಾದ ತೋಟ. ಕಾನಿಂದ ಹಂದಿಗಳು ತೋಟಕ್ಕೆ ಹೋಗುವ ಹಾದಿ. ಏರು ಹತ್ತಿದಾಗ ಎಡಗಡೆ ಸರ್ಕಾರಿ ನೀರು ಟ್ಯಾಂಕು. ಬಿಳಿಬಣ್ಣದ್ದು. ಸ್ವಲ್ಪ ಮುಂದೆ ಬಂದರೆ ಬಲಗಡೆ ಕೆಳಗೆ ಚೌಡಿ ಅಳುತ್ತಾಳೆ ಎನ್ನುವ ಜಾಗ. ಆಹಾ ! ಸುಮಾರಿನಂತವರೂ ಒಬ್ಬರೆ ಹೋಗುವಾಗ ರಾತ್ರಿ ಹೊತ್ತು ಹಾಡು ಹೇಳಿಕೊಂಡೊ, ಕೊಟ್ಟೆ ಹಾಕಿಕೊಂಡೊ ಹೋಗುತ್ತಿದ್ದರು. ರಾತ್ರಿ ೧೧ರವರೆಗೆ ಅಡಿಕೆ ಸುಲಿಯಲು ಬರುತ್ತಿದ್ದ ನಾಯಕರ ಕೇರಿಯವರು ಚಿಮಣಿ ಬುರುಡೆ, ದೊಂದಿ, ಬ್ಯಾಟರಿ ಯಾವುದಾದರೂ ಜೊತೆಗೆ ಇಟ್ಟುಕೊಂಡಿರುತ್ತಿದ್ದರು. ಇಂತಿಪ್ಪ ಜಾಗದಲ್ಲಿ ನಾನು ಯಾವ ಬೆಳಕಿನ ಆಸರೆಯಿಲ್ಲದೆ ಕತ್ತಲಲ್ಲಿ ಬರುತ್ತಿದ್ದೆನೆಂದರೆ ನಂಬುತ್ತೀರ? ನಂಬಲೇಬೇಕು.
ಮೊದಮೊದಲು ಬಿಳಿಟ್ಯಾಂಕು ಅಡಿಕೆ ಸುಲಿಯುವವರು, ಸುಲಿದ ಅಡಿಕೆ ಬೇಯಿಸುವ ಒಲೆ ಮುಂದೆ ಬೆಚ್ಚಗೆ ಕುಳಿತು ದೊಡ್ಡವರು ಹೇಳುತ್ತಿದ್ದ ಕತೆಗಳಂತೆ ದೊಡ್ಡ ಭೂತವೇ ಇರಬೇಕು ಎನಿಸುತ್ತಿತ್ತು. ನಾನು ಎರಡು ದಿನ ಓಡಿಕೊಂಡೇ ಬಂದ ನೆನಪು. ನಂತರ ಸುಡುಗಾಡು ಭೂತ ಅಲ್ಲ, ಎಂತ ಅಲ್ಲ. ಇನ್ನೂ ನಿತ್ತುಕೊಂಡೇ ಇದೆ! ಹತ್ತಿರ ಹೋಗಿ ಮುಟ್ಟಿ ಆಯ್ತು. ಅದೇ ಟ್ಯಾಂಕ್ ಕತ್ತಲಲ್ಲಿ ಹೀಗೆ ಕಾಣಿಸುತ್ತದೆ. ಒಳ್ಳೆಯದಾಯ್ತು. ಬಿಳಿಬಣ್ಣ ಬಳಿದಿದ್ದು. ನಾನು ಎಲ್ಲಿವರೆಗೆ ಬಂದೆ, ಇನ್ನೆಷ್ಟು ದೂರ ಹೋಗಬೇಕೆಂದು ಗೊತ್ತಾಯ್ತಲ್ಲ ! ಖುಷಿಯಾಯ್ತು. ಇನ್ನುಳಿದಿದ್ದು ಚೌಡಿ. ಅವಳನ್ನು ಅರ್ಜೆಂಟು ಮಾತಾಡಿಸ್ಲಿಕ್ಕಿತ್ತು. ಅನಾಯಾಸವಾಗಿ ಶ್ರೀ ಲಕ್ಷ್ಮೀ ನರಸಿಂಹ ದರ್ಶನ ಕೊಟ್ಟ ಮೇಲೆ ದೇವರ ಭಯ ಹೊರಟುಹೋಗಿತ್ತು. ನನ್ನ ಅಪ್ಪ, ಅಮ್ಮ ಅಜ್ಜಿ ಮನೆಯಲ್ಲಿ ಬಿಟ್ಟಿದ್ದೇ ದೊಡ್ಡ ದುಃಖ ಎಂದು ತಿಳಿದುಕೊಂಡಿದ್ದ ನನಗೆ ದೇವಿಯಾದ ಚೌಡಿಗೆ ಅದೇನು ದುಃಖ ? ರಾತ್ರಿ ಅಳೋದಕ್ಕೆ ಎಂದು ಕೇಳಬೇಕಾಗಿತ್ತು. ಆ ಜಾಗದ ಹತ್ತಿರ ಬಂದಾಗ ಸ್ವಲ್ಪ ನಿಧಾನವಾಗಿ ಹೋಗುತ್ತಿದ್ದೆ. ಮೊದಲೇ ಆಟ ಮಾಡ್ಕೊಂಡು, ಜೀರುಂಡೆಯ ಸದ್ದು, ಬಾನ ಬೆಳಕು, ತಣ್ಣನೆಯ ಗಾಳಿ ಎಲ್ಲಾ ಅನುಭವಿಸಿಕೊಂಡು ಹೋಗುವುದು ನಿಧಾನ. ಆ ಜಾಗ ಬಂದಾಗ ಇನ್ನೂ ನಿಧಾನ. ಕಿವಿ ಪೂರ್ತಿ ಎಚ್ಚರ. ಎಂತ ಅಳುವೂ ಇಲ್ಲ ಮಣ್ಣೂ ಇಲ್ಲ. ಹಂದಿಗಳು ಬರುವುದು ಬೆಳಗಿನ ಜಾವಕ್ಕೆ. ಚೌಡಿ ಅಳೋದು ಮುಚ್ಚಿಟ್ಟಾದರೆ ಎಂದು ದೊಡ್ಡವರು ಹೇಳಿದ್ರು. ಸರಿ. ಈಗ ಹೊಸ ಹುಳು ಬಿಟ್ಕೊಂಡು ಆ ಬಗ್ಗೆ ಯೋಚ್ನೆ ಮಾಡ್ಕೊಂಡು ಬರುವಷ್ಟರಲ್ಲಿ ಮನೆ ಬಂದುಬಿಡ್ತಿತ್ತು. ಈಗ ನಿಜವಾಗಿ ಒಂದು ಪಾಠವಿತ್ತು. ನನಗೆ ಯೋಚನೆ ಬೇಕೊ, ಅನುಭವನೊ? ಆಯ್ಕೆ ಕಷ್ಟವಾಗಲಿಲ್ಲ. ಒಂದಿನ ಯೋಚನೆ ಮತ್ತೊಂದಿನ ಅನುಭವ ಇವುಗಳಿಗೆ ಮೀಸಲಿಟ್ಟೆ. ಹಾಗೆ ಬದುಕು ಯೋಚನೆಗಳ ಜೊತೆಗೆ ಬದುಕಿನ ಸೌಂದರ್ಯವನ್ನೂ ಅನುಭವಿಸುವುದು ಕಲಿಸಿತು.
ಕತ್ತಲ ಪಯಣ ನಾಳೆಗೆ.....
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ